ಬೆಳಗಾವಿ : ಮಕ್ಕಳ ಪ್ರತಿಭೆಗೆ, ಜೀವನದಲ್ಲಿ ಅತ್ಯುನ್ನತ ಸಾಧನೆ ಮಾಡಲು ಬಡತನ ಅಡ್ಡಿಯಾಗಬಾರದೆನ್ನುವ ಕಾರಣದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಭಾನುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾವಗೆ ಗ್ರಾಮದ ಸರ್ಕಾರಿ ಹಿರಿಯ ಪಾಥಮಿಕ ಮರಾಠಿ ಶಾಲೆಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಗಮನಕ್ಕೆ ತಂದರೂ ಆದ್ಯತೆಯ ಮೇಲೆ ಪರಿಹರಿಸುತ್ತಿದ್ದೇನೆ. ಸರಕಾರದ ಯೋಜನೆ ಇರಬಹುದು, ಶಾಸಕರ ನಿಧಿ ಇರಬಹುದು, ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ಇರಬಹುದು. ಒಟ್ಟಾರೆ ಯಾವೊಂದು ಶಾಲೆ, ಯಾವೊಂದು ಮಕ್ಕಳು ಕೂಡ ಸಮಸ್ಯೆ ಎದುರಿಸಬಾರದೆಂದು ಎಚ್ಚರವಹಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಜಿಮ್ ಹಾಗೂ ಕ್ರೀಡಾ ಉಪಕರಣಗಳನ್ನು ವಿತರಿಸಲಾಗುತ್ತಿದೆ. ವಯಕ್ತಿಕಾಗಿ ಹಲವಾರು ಪ್ರತಿಭೆಗಳಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಯಾರೊಬ್ಬರೂ ತಮ್ಮ ಸಾಧನೆಯಲ್ಲಿ ಹಿಂದುಳಿಯಲು ಅವಕಾಶ ಕೊಡುವುದಿಲ್ಲ. ನಿಮ್ಮ ಜೊತೆಗೆ ಸದಾ ನಾನಿದ್ದೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಪಾಲಕರು ಎಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಓದಿಸುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಿಮ್ಮ ಕಷ್ಟದಲ್ಲಿ ನಾನಿಲ್ಲದಿದ್ದರೆ ನಾನು ಶಾಸಕಿಯಾಗಿ ಏನು ಪ್ರಯೋಜನ? ನಿಮ್ಮ ಮಕ್ಕಳು ಬೇರೆ ಅಲ್ಲ, ನನ್ನ ಮಕ್ಕಳು ಬೇರೆ ಅಲ್ಲ. ಹಾಗಾಗಿ ಎಂತಹ ಸಂದರ್ಭ ಬಂದರೂ ಮಕ್ಕಳ ಓದನ್ನು ನಿಲ್ಲಿಸುವುದು ಬೇಡ. ಮಕ್ಕಳ ಓದಿಗೆ ನೆರವು ಕೇಳಲು ಮುಜುಗರ ಬೇಡ. ಅಂತಹ ಪರಿಸ್ಥಿತಿ ಬಂದರೆ ಎಲ್ಲರೂ ಸೇರಿ ಅದಕ್ಕೊಂದು ಪರಿಹಾರ ಕಂಡುಕೊಳ್ಳೋಣ. ದೇವರು ಯಾವುದಾದರೊಂದು ದಾರಿಯನ್ನು ತೋರಿಸುತ್ತಾನೆ ಎಂದ ಹೆಬ್ಬಾಳಕರ್, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಈ ನಿಮ್ಮ ಮನೆಯ ಮಗಳ ಮೇಲಿರಲಿ ಎಂದು ವಿನಂತಿಸಿದರು.
ನಾವಗೆ ಗ್ರಾಮದಲ್ಲಿ ಈಗಾಗಲೇ ಕನ್ನಡ ಮತ್ತು ಮರಾಠಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಜತೆಗೆ ಎರಡು ಅಂಗನವಾಡಿ ಕೇಂದ್ರಗಳನ್ನು ಸಹ ನಿರ್ಮಾಣ ಮಾಡಿ ಕೊಡಲಾಗಿದೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಅರ್ಚನಾ ಚಿಗರೆ, ಸಾತೇರಿ ಕಮತಿ, ಶಿಲ್ಪಾ ಕಮತಿ, ಮಾರುತಿ ಹುರಕಡ್ಲಿ, ಪ್ರಶಾಂತ ಶಹಾಪೂರಕರ್, ಶ್ಯಾಮ್ ಪಾಟೀಲ, ಸುರೇಶ ಹುಂಬರವಾಡಿ, ಧಾನಾಜಿ ಗೊಲ್ಯಾಳ್ಕರ್ ಹನಮಂತ ಹಕಲ್ದಾರ್, ಸುಜಾತಾ, ಸುರೇಶ ಹುಂಬರವಾಡಿ, ರಾಜಾರಾಮ್ ಗೊಲ್ಯಾಳ್ಕರ್, ಭರ್ಮಾ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.