ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಳಸಾರೋಹಣ ಹಾಗೂ ಕುಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮದಲ್ಲಿ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಲೆಯ ಮೇಲೆ ಕಲಶ ಹೊತ್ತು ಬಹುದೂರದವರೆಗೂ ಹೆಜ್ಜೆ ಹಾಕಿ ಗಮನ ಸೆಳೆದರು. ಸಾಂಪ್ರದಾಯಿಕ ಗ್ರಾಮೀಣ ಮಹಿಳೆಯಂತೆ ಅವರು ಕಲಶ ಹೊತ್ತು ಸಾಗುವುದನ್ನು ಕಂಡ ಸ್ಥಳೀಯರು ಶಾಸಕಿ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಡಿಸಿದರಲ್ಲದೆ ಅನೇಕರು ಪೈಪೋಟಿಗೆ ಬಿದ್ದಂತೆ ತಮ್ಮ ಮೊಬೈಲ್ ಗಳಲ್ಲಿ ಈ ದೃಶ್ಯ ಚಿತ್ರೀಕರಿಸಿಕೊಂಡರು.
ಈ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ನಮ್ಮ ಹೆಮ್ಮೆ. ಅವುಗಳನ್ನು ಪ್ರತಿಬಿಂಬಿಸುವ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ತಮಗೆ ತೃಪ್ತದಾಯಕ ಎನಿಸುವುದಾಗಿ ಹೇಳಿದರು.
ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮಿಟಿಯವರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.