ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮ ಗೌಡ ಕಾನೂನು ಮಹಾ ವಿದ್ಯಾಲಯ ದಲ್ಲಿ ಮಾರ್ಚ್ 7 ರಿಂದ 9 ರ ವರೆಗೆ 15ನೇ ಎಂ. ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ (ಮೂಟ್ ಕೋರ್ಟ್) ಸ್ಪರ್ಧೆ ನಡೆಯಲಿದೆ.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿ ಕಾರ್ಯದರ್ಶಿ ಗಳಾದ ಕುಲಕರ್ಣಿ ಹಾಗೂ ಗಣಾಚಾರಿ ಅವರು, ಕಾಲೇಜು ಪ್ರಾಂಶುಪಾಲ ಡಾ. ಅನಿಲ್ ಹವಾಲ್ದಾರ್ ಅವರು ಈ ವಿಷಯ ತಿಳಿಸಿದರು.
ಈ ಕಾರ್ಯಕ್ರಮದ ಮಹಾ ಪೋಷಕರು ಭಾರತದ ಮಾಜಿ ಅಟಾರ್ನಿ ಜನರಲ್ ಮತ್ತು ನಮ್ಮ ಕಾಲೇಜಿನ ಹೆಮ್ಮೆಯ ಮಾಜಿ ವಿದ್ಯಾರ್ಥಿ ಪದ್ಮವಿಭೂಷಣ ಕೆ. ಕೆ. ವೇಣುಗೋಪಾಲ್ ಅವರು. ಅವರ ತಂದೆ ಹಾಗೂ ಹಿರಿಯ ಸಾಂವಿಧಾನಿಕ ಕಾನೂನು ನ್ಯಾಯವಾದಿಯಾಗಿದ್ದ ಎಂ. ಕೆ ನಂಬಿಯಾರ ಅವರ ಸ್ಮರಣೆಯಲ್ಲಿ ಇಲ್ಲಿಯವರೆಗೆ 14 ಬಾರಿ ಈ ರಾಷ್ಟ್ರೀಯ ಸ್ಪರ್ಧೆ ಗಳನ್ನು ನಡೆಸಲಾಗಿದೆ.
ಈ ಬಾರಿಯ ಸ್ಪರ್ಧೆಯಲ್ಲಿ ಭಾರತದ 9 ವಿವಿಧ ರಾಜ್ಯಗಳಿಂದ 42 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, 3 ತಂಡಗಳು ವಿವಿಧ ರಾಷ್ಟ್ರೀಯ ಲಾ ಶಾಲೆಗಳಿಂದ ಸೇರಿವೆ. ಹಿಂದಿನ ವರ್ಷಗಳಿಗಿಂತಲೂ ಈ ವರ್ಷ ಹೆಚ್ಚಿನ ಸಂಖ್ಯೆ ಯಲ್ಲಿ ತಂಡಗಳು ಭಾಗವಹಿಸಲು ಆಸಕ್ತಿ ತೋರುತ್ತಿದ್ದಾರೆ.
ಸುಮಾರು 40 ವಕೀಲರು ಮತ್ತು ಶಿಕ್ಷಣತಜ್ಞರು ಅಣಕು ನ್ಯಾಯಾಲಯದ ನ್ಯಾಯಾಧೀಶರಾಗಿ ಮೌಲ್ಯಮಾಪನ ಮಾಡಲಿದ್ದಾರೆ. ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ಒಟ್ಟು ರೂ. 1,41,000 ಮೌಲ್ಯದ ಬಹುಮಾನಗಳನ್ನು ನೀಡಲಾಗುವುದು.
ಸ್ಪರ್ಧೆಯ ಉದ್ಘಾಟನಾ ಸಮಾರಂಭವು 7 ಮಾರ್ಚ್ 2025ರಂದು ಸಂಜೆ 6:00 ಗಂಟೆಗೆ ಕಾಲೇಜಿನ ಆವರಣ ದಲ್ಲಿ ಕೆ. ಕೆ. ವೇಣುಗೋಪಾಲ್ ಸಭಾಂಗಣ, ಕೆಎಲ್ಎಸ್ ಪ್ಲಾಟಿನಂ ಜೂಬಿಲಿ ಕಟ್ಟಡ, ತಿಲಕವಾಡಿಯಲ್ಲಿ ನಡೆಯಲಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ. ಕರ್ನಾಟಕ ಲಾ ಸೊಸೈಟಿಯ ವಕೀಲ ಮತ್ತು ಕಾರ್ಯದರ್ಶಿ ವಿ. ಜಿ. ಕುಲಕರ್ಣಿ ಅವರು ಸಮಾರಂಭದ ಅಧ್ಯಕ್ಷರಾಗಿರಲಿದ್ದಾರೆ ಮತ್ತು ಎಲ್ಲಾ ಆಡಳಿತ ಮಂಡಳಿ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಸ್ಪರ್ಧೆಯ ಮುಕ್ತಾಯ ಸಮಾರಂಭವು 9 ಮಾರ್ಚ್ 2025ರಂದು ಮಧ್ಯಾಹ್ನ 4:00 ಗಂಟೆಗೆ ಕೆ. ಕೆ. ವೇಣುಗೋಪಾಲ್ ಸಭಾಂಗಣ ದಲ್ಲಿ ನಡೆಯಲಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ. ಬಸವರಾಜ ಅವರು ಮುಖ್ಯ ಅತಿಥಿಯಾಗಿರಲಿದ್ದಾರೆ. ಜಿಐಟಿಯ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ರಾಜೇಂದ್ರ ಬೆಳಗಾಂಕರ್ ಅವರು ಸಮಾರಂಭದ ಅಧ್ಯಕ್ಷರಾಗಿರಲಿದ್ದಾರೆ ಮತ್ತು ಎಲ್ಲಾ ನಿರ್ವಹಣಾ ಸದಸ್ಯರು ಉಪಸ್ಥಿತರಿರುತ್ತಾರೆ ಎಂದು ವಿವರಿಸಿದರು.