ಬೆಳಗಾವಿ : ಊರ ಹೊರಗಡೆ ಪಾರ್ಕಿಂಗ್ ಮಾಡಿದ್ದ ಟಾಟಾ ಸುಮೋ ವಾಹನಕ್ಕೆ ಮಧ್ಯರಾತ್ರಿ ಗಾಂಜಾ ನಶೆಯಲ್ಲಿದ್ದ ಯುವಕರ ಗ್ಯಾಂಗೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದಲ್ಲಿ ನಡೆದಿದೆ.
ಕೆದನೂರ ಗ್ರಾಮದ ಮಾರುತಿ ಭಾಗಣ್ಣಾ ರಾಜಾಯಿ ಎಂಬುವರು ಊರು ಹೊರಗಡೆ ತಮ್ಮ ಟಾಟಾ ಸುಮೋ ಗೊಲ್ಡ್ ವಾಹನವನ್ನು ನಿಲ್ಲಿಸಿದ್ದರು. ಮಧ್ಯರಾತ್ರಿ ಊರಲ್ಲಿ ಪ್ರತಿದಿನ ಗಾಂಜಾ ಸೇವಿಸಿ ಒಂದಿಲ್ಲಂದು ಕಿತಾಪತಿ ಮಾಡುತ್ತ ಪ್ರಸಿದ್ಧಿ ಪಡೆದಿರುವ ಗಾಂಜಾ ಗ್ಯಾಂಗ್ ನ ಯುವಕರು ಜೂನ್ 16 ರ ಮಧ್ಯರಾತ್ರಿ ಹಾಗೂ 17 ರ ನಸುಕಿನ ಜಾವ ಆ ನಿಂತ ಸುಮೋಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಕರಕಲ ಮಾಡಿದ್ದಾರೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಈ ಕೃತ್ಯದ ಹಿಂದೆ ರಾಜಕೀಯವಿದ್ದು,ಇತ್ತಿಚಿಗೆ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣ ತಳಕುಹಾಕಿಕೊಂಡಿದೆ. ಕೊಲೆಯಾದ ಯುವಕನ ಕಡೆಯವರಿಂದ ಈ ದುಷ್ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ವಾರದ ಹಿಂದಷ್ಟೇ ಕೊಲೆ ಆರೋಪಿಗೆ ಜಾಮೀನು ಸಿಕ್ಕಿದ್ದು,ಸುಮೋ ಮಾಲಿಕ ಆತನನ್ನು ಕರೆತರಲು ಹೋಗಿದ್ದ ಎನ್ನುವ ಕಾರಣಕ್ಕಾಗಿ ಬೆಂಕಿ ಹಚ್ಚಲಾಗಿದೆ ಎಂದು ಗ್ರಾಮದಲ್ಲಿ ಸುದ್ದಿ ಪಸರಿಸಿದೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅದೆ ಗ್ರಾಮದ 5 ಜನ ಶಂಕಿತರಾದ1. ಅಶ್ವಿನ ಮಲ್ಲಪ್ಪಾ ಚಿಂದಿ
2.ನಂದು ಮಹಾದೇವ ಸಂಭಾಜೀ
3.ರಾಮಾ ಪರಶರಾಮ ತೋಲಗೆಕರ
4.ರಾಹುಲ ಮಲ್ಲಪ್ಪಾ ರಾಜಾಯಿ
5.ಲೊಕೇಶ ಅರುಣ ಶಾಪೂರಕರ ಎಂಬುವರ ಮೇಲೆ IPC 435 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ವರೆಗೆ ಯಾವುದೆ ಕ್ರಮವಾಗಿಲ್ಲ.
ಈ ಘಟನೆ ಕೇದನೂರ ಗ್ರಾಮಸ್ಥರನ್ನು ಬೆಚ್ಚಿಬಿಳಿಸಿದೆ. ಇಲ್ಲಿ ಗಂಜಾ ಧಂಧೆ ವಿಪರೀತವಾಗಿ ನಡೆಯುತ್ತಿದ್ದು, ಗ್ರಾಮಸ್ಥರು ಪೊಲೀಸರಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಇಲ್ಲಿನ ಗಾಂಜಾ ಗ್ಯಾಂಗ್ ವನ್ನು ಬೆಳಗಾವಿ ಸಿಐಡಿ ಪೊಲೀಸರು ಭೇದಿಸಿದ್ದರು. ಆದರೆ ಯಾಕೋ ಕಾಕತಿ ಪೊಲೀಸರು ಮಾತ್ರ ಅಕ್ರಮ ದಂಧೆಕೋರರನ್ನು ಮಟ್ಟ ಹಾಕುವಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.