ಬೆಂಗಳೂರು: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗೌಡಪಾಟೀಲ ಯತ್ನಾಳ ಅವರ ಸವಾಲನ್ನು ಸ್ವೀಕರಿಸಿರುವ ಶಿವಾನಂದ ಪಾಟೀಲ ಶುಕ್ರವಾರ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದು, ಖಾದರ್ ಅವರು ರಾಜೀನಾಮೆಯನ್ನು ಅಂಗೀಕರಿಸಿಲ್ಲ.
ಯತ್ನಾಳ ಅವರು ಇತ್ತೀಚೆಗೆ ಶಿವಾನಂದ ಪಾಟೀಲ ಅವರನ್ನು ಉದ್ದೇಶಿಸಿ, ಅವರು ಪಾಟೀಲರೇ ಅಲ್ಲ, ‘ರಾಜಕೀಯಕ್ಕಾಗಿ ಪಾಟೀಲ’ ಅಂತ ಸರ್ನೇಮ್ ಸೇರಿಸಿದ್ದು, ಅಪ್ಪನಿಗೆ ಹುಟ್ಟಿದವ ಆದರೆ ಶುಕ್ರವಾರದೊಳಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ನನ್ನ ಮುಂದೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದರು. ಆ ಸವಾಲು ಸ್ವೀಕರಿಸಿದ ಶಿವಾನಂದ ಪಾಟೀಲ ರಾಜೀನಾಮೆ ನೀಡಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ ರಾಜೀನಾಮೆ ನೀಡಿದ ನಂತರ ತಮ್ಮ ರಾಜೀನಾಮೆ ಸ್ವೀಕರಿಸಬೇಕು ಎಂದು ಅವರು ಷರತ್ತು ಹಾಕಿದ್ದಾರೆ.
ರಾಜೀನಾಮೆ ಪತ್ರ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಶಿವಾನಂದ ಪಾಟೀಲ, ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಇದು ವೈಯಕ್ತಿಕ ತೀರ್ಮಾನ. ಯತ್ನಾಳ ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.