ಬೆಳಗಾವಿ : ಕಳೆದ 11 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಮೃಣಾಲ್ ಹೆಬ್ಬಾಳ್ಕರ್ ಯೋಗ್ಯ ಅಭ್ಯರ್ಥಿ ಆಗಿದ್ದು, ಜನರ ನಾಡಿ ಮಿಡಿತ ಅರಿತಿದ್ದಾರೆ. ಇಂಥ ಸೂಕ್ತ ಅಭ್ಯರ್ಥಿಗೆ ಜನರು ಆಶೀರ್ವದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ಮೃಣಾಲ್ ಜಿಲ್ಲೆಯ ಘನತೆಯನ್ನು ಎತ್ತಿಹಿಡಿಯಲಿದ್ದಾರೆ ಎಂದರು.
ಕಂಗ್ರಾಳಿ ಗಲ್ಲಿ, ಅಲಾರವಾಡ, ಬಸವನ ಕುಡಚಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿ ಮಾತನಾಡಿದ ಸಚಿವರು, ನಮ್ಮೆಲ್ಲರ ಮಾರ್ಗದರ್ಶನದಲ್ಲಿ ಮೃಣಾಲ್ ಹೆಬ್ಬಾಳ್ಕರ್ ಕಾರ್ಯನಿರ್ವಹಿಸಲಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಹಸಿವನ್ನು ನೀಗಿಸುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಚಿವರು ಹೇಳಿದರು. ಮೃಣಾಲ್ ಹೆಬ್ಬಾಳ್ಕರ್ ಗೆಲ್ಲಿಸುವ ಮೂಲಕ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲೆಯ ಮನೆಮಗ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಮತ ನೀಡಿ, ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು. ಹೊರಗಿನ ಅಭ್ಯರ್ಥಿಯನ್ನು ತಿರಸ್ಕರಿಸಿ ನಿಮ್ಮ ಮನೆ ಮಗನನ್ನು ಗೆಲ್ಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಲಿದ್ದಾನೆ ಎಂದು ಹೇಳಿದರು. ಅಲಾರವಾಡ ಗ್ರಾಮದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ, ಹೂವಿನ ಮಳೆಗರೆದು ಸ್ವಾಗತಿಸಲಾಯಿತು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ಮುಖಂಡರಾದ ಮಲ್ಲೇಶ ಚೌಗಲೆ, ದೀಪಕ್ ಪಾಟೀಲ್, ಸಾಗರ್ ತಾಳೇಕರ್, ಗಜಾನನ ಕಡಚಿ, ಸಿದ್ದಣ್ಣನವರ್, ಅನಿಲ್ ಅನಗೋಳ, ಸತೀಶ್ ರಾಯಗೊಳ ಉಪಸ್ಥಿತರಿದ್ದರು..