ಹಾವೇರಿ: ರಾಣೆಬೆನ್ನೂರಿನಲ್ಲಿ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ, ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಸುಂಟರಗಾಳಿಗೆ ಬೃಹತ್ ಪೆಂಡಾಲ್ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಸಚಿವರು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ.
ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದ ಸಚಿವರನ್ನು ಮಾಧ್ಯಮದವರು ಮಾತನಾಡಿಸುತ್ತಿದ್ದರು. ಈ ವೇಳೆ ಏಕಾಏಕಿ ಧೂಳು ಮಿಶ್ರಿತ ಭಾರಿ ಸುಂಟರಗಾಳಿ ಬೀಸಿದ್ದು, ಸಚಿವರ ಬೆನ್ನಹಿಂದೆಯೇ ಇದ್ದ ಬೃಹತ್ ಪೆಂಡಾಲ್ ಹಾರಿ ಕುಸಿದು ಬಿತ್ತು. ಪೆಂಡಾಲ್ ಕುಸಿಯುತ್ತಿದ್ದಂತೆಯೇ ಸಚಿವರು ಹಾಗೂ ಅಲ್ಲಿದ್ದವರು ಕ್ಷಣ ಕಾಲ ವಿಚಲಿತರಾದರು. ಕೂಡಲೇ ಎಚ್ಚೆತ್ತ ಸಚಿವರ ಅಂಗರಕ್ಷಕರು ಸಚಿವ ಸತೀಶ್ ಜಾರಕಿಹೊಳಿ ಅವರ ರಕ್ಷಣೆ ಮುಂದಾದರು. ಇನ್ನು, ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು. ಸದ್ಯ ಭಾರೀ ಅನಾಹುತ ತಪ್ಪಿದಂತಾಗಿದೆ. ಇಡೀ ಶಾಮಿಯಾನ ನೆಲಸಮವಾಗಿದ್ದು, ಚೇರ್ಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.ಅದೃಷ್ಟವಶಾತ್ ಸಚಿವರು ಹಾಗೂ ಯಾರಿಗೂ ಯಾವುದೇ ಗಾಯಗಳಾಗಿಲ್ಲ.


