ಬೆಂಗಳೂರು :ಸಚಿವೆ ಶಶಿಕಲಾ ಜೊಲ್ಲೆ ಅವರ ಮನೆಯ ಮುಂದೆ ಭಯಾನಕ ರೀತಿಯಲ್ಲಿ ಕೊಲೆಯ ಯತ್ನ ಬುಧವಾರ ನಡೆದಿದೆ.ಸ್ನೇಹಿತನ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ.
ಸುನಿಲ್ ಕುಮಾರ್, ಅರುಣ್, ಕೃಷ್ಣ ಎಂಬುವರು ಈ ಕೃತ್ಯ ನಡೆಸಿದ್ದಾರೆ. ರೌಡಿಶೀಟರ್ ಗಗನ್ ಮತ್ತು ಉಳಿದ ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದಾರೆ. ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನಿಲ್ ಕುಮಾರ್ ಮತ್ತು ಗಗನ್ ನಡುವೆ ಆಸ್ತಿ ವಿಚಾರಕ್ಕೆ ಮನಸ್ತಾಪವಾಗಿತ್ತು. ಆದ್ದರಿಂದ ಸುನಿಲ್ ಮಾತನಾಡಬೇಕು ಎಂದು ಮಾರ್ಚ್ 20ರ ರಾತ್ರಿ ಹತ್ತು ಗಂಟೆಗೆ ಕಾಲ್ ಮಾಡಿ ಫ್ರೇಜರ್ ಟೌನ್ ಗೆ ಕರೆಸಿಕೊಂಡಿದ್ದ. ನಂತರ ಅಲ್ಲಿಂದ ಕಾರಿನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹೊಡೆದು ಮಾರ್ಚ್ 21ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಬಂದು ಕಾರು ನಿಲ್ಲಿಸಿದ್ದ. ಕೆಎ 03 ಎಮ್ ಎಫ್ 3347 ಕಾರಿನಲ್ಲಿ ನಾಲ್ವರು ಇದ್ದರು. ನಾಲ್ವರು ಜೊತೆಜೊತೆಯಾಗಿಯೇ ಸಿಟಿ ರೌಂಡ್ಸ್ ಹೊಡೆದಿದ್ದಾರೆ. ಆದರೆ ಈ ವೇಳೆ ಗಲಾಟೆ ನಡೆದಿದೆ. ಆ ಸಂದರ್ಭದಲ್ಲಿ ದೊಣ್ಣೆ ಹಾಗೂ ಇತರ ವಸ್ತುಗಳ ಮೂಲಕ ಸುನಿಲ್ ಸೇರಿ ಮೂವರು ಗಗನ್ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ನಂತರ ಕೆಳಗಿಳಿಸಿ ಮೂರ್ನಾಲ್ಕು ಬಾರಿ ಕಾರನ್ನು ಆತನ ಮೇಲೆ ಹರಿಸಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ಜೆ ಸಿ ನಗರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ
ಗಗನ್ ಕಾಲು, ಪಕ್ಕೆಲಬು ಮುರಿದಿದೆ. ಕಣ್ಣು, ಮುಖ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಗಾಯಾಳು, ಗಗನ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಹಲ್ಲೆ ನಡೆಸಿದ ಇಬ್ಬರು ಪರಾರಿಯಾಗಿದ್ದಾರೆ. ಆರೋಪಿ ಸುನಿಲನ್ನು ಪೊಲೀಸರು ಬಂಧಿಸಿದ್ದಾರೆ.