ನವದೆಹಲಿ: ‘ಹಳೆಯ ತೆರಿಗೆ ಪದ್ಧತಿಯನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವವು ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
‘ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಲು ಆದಾಯ ತೆರಿಗೆ ಕಡಿತಕ್ಕೆ ಕ್ರಮಕೈಗೊಂಡಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಂತಹ ಟೀಕೆಗಳಿಗೆ ಅರ್ಥವೂ ಇಲ್ಲ’ ಎಂದರು.
ವಾರ್ಷಿಕ ₹12 ಲಕ್ಷದವರೆಗೆ ಆದಾಯ ಹೊಂದಿರುವವರ ಆದಾಯ ತೆರಿಗೆ ಹೊರೆಯು ಹೊಸ ತೆರಿಗೆ ಪದ್ಧತಿ ಅಡಿ 2025-26ನೇ ಆರ್ಥಿಕ ವರ್ಷದಿಂದ (ಏಪ್ರಿಲ್ 1) ಸೊನ್ನೆಗೆ ಇಳಿಯಲಿದೆ. ವೇತನದಾರ ವರ್ಗದವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯವಿದೆ. ಹಾಗಾಗಿ, ಈ ವರ್ಗದವರಿಗೆ ವಾರ್ಷಿಕ ₹12.75 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಹೊರೆ ಇರುವುದಿಲ್ಲ.
2025-26ನೇ ಸಾಲಿನ ಬಜೆಟ್ನಲ್ಲಿ ಬಂಡವಾಳ ವೆಚ್ಚಕ್ಕೆ ₹11.21 ಲಕ್ಷ ಕೋಟಿ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
: