ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೊನ್ನಿಹಾಳ ಗ್ರಾಮದ ಶ್ರೀ ಬ್ರಹನ್ಮಠದ ಕಾಲಂ ಪೂಜೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾನ್ಯ ಹಳ್ಳಿಯಿಂದ ಬಂದಿರುವ ನನಗೆ ರಾಜ್ಯದ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ಗ್ರಾಮೀಣ ಕ್ಷೇತ್ರದ ಜನರಿಂದಾಗಿ. ಹಾಗಾಗಿ ನಿಮ್ಮ ಋಣವನ್ನು ತೀರಿಸಲು ನಾನು ಉಶಿರಿರುವವರೆಗೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರವೆಂದರೆ ಒಂದು ಮಿನಿ ಭಾರತ ಇದ್ದಂತೆ. ಇಲ್ಲಿ ಎಲ್ಲ ಜಾತಿ, ಧರ್ಮ, ಜನಾಂಗದ ಜನರಿದ್ದಾರೆ. ಕೂಲಿಕಾರರು, ಕೃಷಿಕರು, ನೌಕರರು, ಈ ದೇಶ ಕಾಯುವ ಸೈನಿಕರ ಎಲ್ಲರನ್ನೊಳಗೊಂಡಿರುವ ಈ ಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಅತ್ಯಂತ ಹಿಂದುಳಿದಿದ್ದ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಅವಕಾಶವನ್ನು ನೀವು ನನಗೆ ನೀಡಿದ್ದೀರಿ. ನಾನು 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಕ್ಷೇತ್ರವನ್ನು ಮರೆಯಲಿಲ್ಲ. ಅಂದಿನಿಂದಲೂ ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನನ್ನು ತೊಡಗಿಸಿಕೊಂಡೆ.
ಯಾವುದೇ ಅಧಿಕಾರವಿಲ್ಲದಿದ್ದರೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಮ್ಮ ಕಾಂಗ್ರೆಸ್ ಸರಕಾರದಿಂದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತಂದೆ. ನಂತರ 2018ರಲ್ಲಿ ಶಾಸಕಿಯಾದ ನಂತರ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಅವಕಾಶವಾಯಿತು.
ಈಗ ನಿಮ್ಮೆಲ್ಲರ ಆಶಿರ್ವಾದದಿಂದ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಮಂತ್ರಿಯಾಗಿರುವುದರಿಂದ ಇನ್ನೂ ಹೆಚ್ಚಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದರು.
ಗ್ರಾಮೀಣ ಕ್ಷೇತ್ರದಲ್ಲಿ ನಾನು ಕಳೆದ 5 ವರ್ಷದಲ್ಲಿ ಸುಮಾರು 105 ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಅನೇಕ ನೂತನ ದೇವಸ್ಥಾನಗಳ ನಿರ್ಮಾಣಕ್ಕೆ ಸಹಾಯ ಮಾಡಿದ್ದೇನೆ. ರಸ್ತೆ, ಗಟಾರ, ಶಾಲೆ, ಕುಡಿಯುವ ನೀರು, ಸಮುದಾಯ ಭವನ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇನೆ. ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿ, ಆರೋಗ್ಯ ವ್ಯವಸ್ಥೆ ಸುಧಾರಣೆ, ಉತ್ತಮ ಶೈಕ್ಷಣಿಕ ಸೌಲಭ್ಯದ ಕೆಡೆಗೆ ಗಮನ ನೀಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಗ್ರಾಮಸ್ಥರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಬ್ರಹನ್ಮಠದ ಶ್ರೀಗಳಾದ ಬಸವರಾಜ ದೇವರು, ಗ್ರಾಮ ಪಂಚಾಯತ ಅಧ್ಯಕ್ಷೆ ರೇಖಾ ಕಟಬುಗೋಳ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಾ ತಳವಾರ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಕೆಪಿಸಿಸಿ ಸದಸ್ಯ ಸುರೇಶ ಇಟಗಿ, ಅಕ್ಷಯ ಕಾಡದೇವರಮಠ, ಸದಾಶಿವ ಹಿಟ್ಟಣಗಿ, ರವಿ ಕೆಂಗೇರಿ, ಮಹದೇವ ತಳವಾರ, ದಾದಾಸಾಹೇಬ್ ಸಾಂಬ್ರೇಕರ್, ಶಿವಾನಂದ ಮಠದ, ಪ್ರಕಾಶ ಕಡ್ಯಾಗೋಳ, ಸುರೇಶ ಕಟಬುಗೋಳ, ರಾಯಪ್ಪ ಕೆಂಗೇರಿ, ಚಂದ್ರಕಾಂತ ಕೆಂಗೇರಿ, ಚನ್ನಯ್ಯ ಮಠದ, ಮೀರಾಸಾಬ್ ಮುಲ್ಲಾ, ನಾಗೇಶ ಕೆಂಗೇರಿ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.