ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 14ರಿಂದ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಜುಲೈ 3 ಅಥವಾ 4ರಂದು ಈ ಬಗ್ಗೆ ನಾವು ಘೋಷಿಸುವುದಾಗಿ ತಿಳಿಸಿದರು. ಆಗಸ್ಟ್ ತಿಂಗಳಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಾಕುತ್ತೇವೆ. ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಸುಭದ್ರ ಸರ್ಕಾರ, ಸಮೃದ್ಧ ಕರ್ನಾಟಕವೇ ನಮ್ಮ ಗುರಿ ಎಂದರು.
ಕಾಂಗ್ರೆಸ್ ಸರ್ಕಾರದಿಂದ ವೈಎಸ್ ಟಿ ಸಂಗ್ರಹ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕುಮಾರಸ್ವಾಮಿ ಕೂಡ ಸರ್ಕಾರ ನಡೆಸಿದ ಅನುಭವ ಇರುವವರು, ರಾಜಕೀಯ ಮುತ್ಸದ್ಧಿಗಳು. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಸರ್ಕಾರ ರಚನೆಯಾಗಿ ಇನ್ನೂ ಒಂದು ತಿಂಗಳು ಐದು ದಿನ. ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ. ಜನರು ಬಹಳಷ್ಟು ಆಶಾಭಾವನೆ ಇಟ್ಟುಕೊಂಡು ಕಾಂಗ್ರೆಸ್ ಗೆ ಆಶಿರ್ವಾದ ಮಾಡಿದ್ದಾರೆ. ಈಗಲೇ ನೀವು ಈ ರೀತಿ ಮಾತನಾಡಲು ಶುರು ಮಾಡಿದರೆ ತಪ್ಪಾಗುತ್ತದೆ ಎಂದು ಹೇಳಿದರು.