ಬೆಳಗಾವಿ :
ರೈತರ ಹಿತದೃಷ್ಟಿಯಿಂದ ಮಲಪ್ರಭಾ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆ ಹಾಗೂ ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯ ಕಾಲುವೆಗಳ ಮೂಲಕ ನವೆಂಬರ್ 7 ರಿಂದ ಒಟ್ಟಾರೆ ಒಂದು ಟಿಎಂಸಿ ನೀರು ಬಿಡಗಡೆಗೆ ನಿರ್ಧರಿಸಲಾಗಿದೆ.
ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಮಾನ್ಯ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ(ನ.4) ನಡೆದ ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ 2ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಪ್ರಸಕ್ತ ಜಲಾಶಯದಲ್ಲಿನ ನೀರಿನ ಲಭ್ಯತೆಗೆ ಅನುಗುಣವಾಗಿ, ಬರಗಾಲವನ್ನು ಗಮನಿಸಿ ರೈತರ ಒತ್ತಾಯದನ್ವಯ ದಿನಾಂಕ 07.11.2023 ರಿಂದ ನೀರನ್ನು ಜನಜಾನುವಾರುಗಳಿಗಾಗಿ ಮೇವಿಗಾಗಿ ಹರಿಸಲು ನಿರ್ಣಯಿಸಲಾಗಿದೆ. ಕಾರಣ ರೈತರು ಮಲಪ್ರಭಾ ಜಲಾಶಯದ ಈ ನೀರನ್ನು ಅವಲಂಬಿಸಿ ಮುಂದಿನ ಯಾವುದೇ ಬಿತ್ತನೆಯನ್ನು ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಾಡದೇ ಇರಲು ಸೂಚಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಮಳೆ ಅಭಾವದಿಂದ ಜಲಾಶಯ ಭರ್ತಿಯಾಗಿರುವುದಿಲ್ಲ ಹಾಗೂ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ತಾಲೂಕಗಳು ಬರಗಾಲ ಪೀಡಿತ ಪ್ರದೇಶಗಳೆಂದು ಸರಕಾರ ಘೋಷಣೆ ಮಾಡಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು, ಸಹಕರಿಸಬೇಕೆಂದು ಸದಸ್ಯ ಕಾರ್ಯದರ್ಶಿಗಳು ಮಲಪ್ರಭಾ ಯೋಜನೆ ನೀರಾವರಿ ಸಲಹಾ ಸಮಿತಿ ಹಾಗೂ ಸೂಪರಿಂಟೆಂಡಿಂಗ್ ಇಂಜಿನೀಯರರು, ಕನೀನಿನಿ ಮಎಕಾನಿ ವೃತ್ತ, ನವಿಲುತೀರ್ಥ ಇವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ರೈತರ ಹಿತದೃಷ್ಟಿಯಿಂದ ನೀರು ಬಿಡುಗಡೆ:
ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಮಾನ್ಯ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ನೀರಿನ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಬೆಳೆಗಳಿಗೆ ಮಾತ್ರವಲ್ಲದೇ ಕುಡಿಯುವ ನೀರಿಗೂ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಆದಾಗ್ಯೂ ರೈತರ ಹಿತದೃಷ್ಟಿಯಿಂದ ಒಂದು ಟಿಎಂಸಿ ನೀರು ಬಿಡುಗಡೆಗೆ ತೀರ್ಮಾನಿಸಲಾಗಿದೆ ಎಂದರು.
ನೀರಾವರಿ ಹಿತಾಸಕ್ತಿ ಹಾಗೂ ಕುಡಿಯುವ ನೀರು ಒದಗಿಸುವುದು ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ ಅವರು, ಪ್ರಸ್ತುತ ಬರಗಾಲ ಇರುವುದರಿಂದ ಮಲಪ್ರಭಾ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ಪಟ್ಟಣಗಳಿಗೆ ನಿರಂತರ(24×7) ನೀರು ಬಿಡುವ ಬದಲಾಗಿ ನಾಲ್ಕೈದು ದಿನಗಳಿಗೊಮ್ಮೆ ನೀರು ಬಿಡುಗಡೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಜಲಾಶಯದಲ್ಲಿರುವ 15 ಟಿಎಂಸಿ ನೀರನ್ನು ಕುಡಿಯುವ ಉದ್ಧೇಶ, ಕೃಷಿ ಬಳಕೆಗೆ ಆದ್ಯತೆ ಆಧರಿಸಿ ನೀರು ಬಿಡುಗಡೆಗೆ ಸಲಹಾ ಸಮಿತಿಯು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಸಲಹೆ ನೀಡಿದರು.
ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಅವರು, ರೈತರ ಹಿತಾಸಕ್ತಿ ಹಾಗೂ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟಕೊಂಡು ಸಮತೋಲನದ ನಿರ್ಧಾರ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಎಂಜಿನಿಯರ್ ವಿ.ಎಸ್.ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಸಚಿವರು ಹಾಗೂ ಶಾಸಕರ ಜತೆ ಚರ್ಚೆ ನಡೆಸಿದ ರೈತರು, ತಮ್ಮ ಸಂಕಷ್ಟವನ್ನು ಪರಿಗಣಿಸಿ ಜನ-ಜಾನುವಾರುಗಳ ಹಿತರಕ್ಷಣೆಗಾಗಿ ನೀರು ಬಿಡುಗಡೆ ಮಾಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.