ಬೆಳಗಾವಿ : ಗುರುಭಕ್ತಿ, ಧಾರ್ಮಿಕ ಆಚರಣೆ, ಸಂಸ್ಕೃತಿ, ಪರಂಪರೆಗಳಿಂದಾಗಿ, ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರವಾಗಿದೆ. ಇಂತಹ ನೆಲದಲ್ಲಿ ಬದುಕಿ, ಬಾಳುವುದೇ ನಮ್ಮ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ತಾರಿಹಾಳ ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ಮಠದಲ್ಲಿ ಶನಿವಾರ ಸಂಜೆ ತಾರಿಹಾಳ ಉತ್ಸವ 2025ರ ಮೌನ ಅನುಷ್ಠಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರಾವಣ ಮಾಸದ ನಿಮಿತ್ಯ ಲೋಕ ಕಲ್ಯಾಣಾರ್ಥ, ಭಕ್ತರ ಹಿತಕ್ಕಾಗಿ ಉತ್ತರಾಖಂಡ ರಾಜ್ಯದ ದೇವಭೂಮಿ ಹಿಮಾಲಯದಲ್ಲಿ ಪೂಜ್ಯ ಶ್ರೀ ಅಡವೀಶ್ವರ ದೇವರು ಒಂದು ತಿಂಗಳ ಮೌನ ಅನುಷ್ಠಾನ ಕೈಗೊಂಡ ಪ್ರಯುಕ್ತ ಕೆಲವು ದಿನಗಳ ಕಾಲ ಪ್ರವಚನ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಂತಹ ಭಕ್ತಿಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಭಾಗ್ಯ. ನಮ್ಮ ಗ್ರಾಮೀಣ ಕ್ಷೇತ್ರ ಸಜ್ಜನರಿಂದಾಗಿ, ಮಠಾಧೀಶರಿಂದಾಗಿ, ನೂರಾರು ಮಂದಿರಗಳಿಂದಾಗಿ ಪುಣ್ಯ ಕ್ಷೇತ್ರವಾಗಿದೆ. ನಿಮ್ಮೆಲ್ಲರ ಸಹಕಾರ, ಆಶಿರ್ವಾದದಿಂದ ನಾನು ರಾಜ್ಯದಲ್ಲಿ ಮಂತ್ರಿಯಾಗಿರುವೆ. ಇಡೀ ರಾಜ್ಯದ ಸೇವೆ ಮಾಡುವ, ರಾಜ್ಯದೆಲ್ಲೆಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರನ್ನು ಬೆಳಗುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಭಾಗ್ಯ ನನ್ನದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮ.ನಿ.ಪ್ರ ಮುರುಘೇಂದ್ರ ಮಹಾಸ್ವಾಮಿಗಳು, ಮುನವಳ್ಳಿ ಸೋಮಶೇಖರ ಮಠದ ಶ್ರೀ ಮ.ನಿ.ಪ್ರ ಪ್ರಭುನೀಲಕಂಠ ಮಹಾಸ್ವಾಮಿಗಳು, ಮೈಸೂರಿನ ಪೂಜ್ಯ ಶ್ರೀ ನಿರಂಜನ ದೇವರು, ಕಲಬುರ್ಗಿ ಮೇಳಕುಂದಾದ ಪೂಜ್ಯ ಶ್ರೀ ಶಶಿಕುಮಾರ್ ದೇವರು, ಪೂಜ್ಯ ಶ್ರೀ ನಿರುಪಾದಿ ದೇವರು, ಗುಳೇದಗುಡ್ಡದ ಪೂಜ್ಯ ಶ್ರೀ ರೇವಣಸಿದ್ಧೇಶ್ವರ ದೇವರು, ಬೈಲವಾಡದ ಪೂಜ್ಯ ಶ್ರೀ ಶಂಕರಲಿಂಗ ದೇವರು, ಗದಗದ ವೇದಮೂರ್ತಿ ಸದಾನಂದ ಶಾಸ್ತ್ರೀಜಿ, ಸೋಮನಾಳದ ಶರಣಬಸವ ಕೆ ಹಿರೇಮಠ, ಪಂಚಾಕ್ಷರಿ ಹೂಗಾರ್, ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದ ಭಕ್ತರು ಇದ್ದರು.