ಬೆಳಗಾವಿ: ಮಹಾದಾಯಿ ಯೋಜನೆಗೆ ಗೋವಾ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಹೇಳಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಮಾತನಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಹಾದಾಯಿ ಯೋಜನೆಗೆ ಗೋವಾ ಸರ್ಕಾರ ಅನುಮತಿ ನೀಡಿದೆ ಎಂತ ಹೇಳಿಕೊಂಡು, ಲೋಕಸಭೆ ಚುನಾವಣೆ ವೇಳೆ ಇದನ್ನೆ ಬಿಜೆಪಿ ನಾಯಕರು ಅಸ್ತ್ರವಾಗಿ ಬಳಿಸಿಕೊಂಡು ಸಿಹಿ ಹಂಚಿಕೆ ಮಾಡಿದ್ದರು. ಇದೀಗ ಅವರಿಂದಲೇ ಉತ್ತರ ನಿರೀಕ್ಷಿಸಲಾಗುತ್ತಿದೆ ಎಂದರು.
ಮಹಾದಾಯಿ ವಿಚಾರವಾಗಿ ಕರ್ನಾಟಕ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಗೋವಾ ಮುಖ್ಯಮಂತ್ರಿ ಅವರ ಆರೋಪವನ್ನು ತಳ್ಳಿಹಾಕಿದ ಸಚಿವರು, ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರು, ಆರೋಗ್ಯ, ಶಿಕ್ಷಣ ವಿಚಾರದಲ್ಲಿ ರಾಜಕಾರಣ ಮಾಡುವ ಅನಿವಾರ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕವೇ ಆಗಲಿ, ಗೋವಾ ರಾಜ್ಯವೇ ಆಗಲಿ ಎರಡೂ ರಾಜ್ಯಗಳು ಕೂಡ ಭಾರತ ದೇಶದ ಅವಿಭಾಜ್ಯ ಅಂಗ. ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ವಿಚಾರವನ್ನು ಖಂಡಿಸುತ್ತೇನೆ. ಹಲ್ಲೆ ಮಾಡಿರುವುದು ಖಂಡಿತವಾಗಿಯೂ ತಪ್ಪು ಎಂದು ಸಚಿವರು ಹೇಳಿದರು.
ಗೋವಾ ರಾಜ್ಯದಿಂದ ಅನೇಕ ಜನರು ಕರ್ನಾಟಕಕ್ಕೆ ಬರುತ್ತಾರೆ. ಕರ್ನಾಟಕ ಜನ ಕೂಡ ಗೋವಾಗೆ ಹೋಗುತ್ತಾರೆ. ಗೋವಾ ರಾಜ್ಯಕ್ಕೆ ಬೇರೆ ರಾಜ್ಯದವರು ಬರದೆ ಇದ್ದರೆ ಅವರ ವ್ಯಾಪಾರ ವಹಿವಾಟು ನಡೆಯಲ್ಲ. ಬೇರೆ ರಾಜ್ಯದ ಜನರಿಗೆ, ಪ್ರವಾಸಿಗರಿಗೆ ತೊಂದರೆ ಆಗದಂತೆ ಅಲ್ಲಿನ ಸರ್ಕಾರ ನೋಡಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದರು.
ಕನ್ನಡಿಗರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಅಲ್ಲಿನ ಸರ್ಕಾರ ಮೌನ ವಹಿಸಬಾರದು. ಗಡಿ ಉಸ್ತುವಾರಿ ಸಚಿವರಾದ ಎಚ್.ಕೆ ಪಾಟೀಲ್ ಅವರ ಗಮನಕ್ಕೆ ಈ ವಿಚಾರ ತರುತ್ತೇನೆ ಎಂದರು.
ಸುರ್ಜೆವಾಲಾ ಅಧಿಕಾರಿಗಳ ಸಭೆ ನಡೆಸಿಲ್ಲ
ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಯಾವ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಎಲ್ಲಾ ಸಚಿವರನ್ನು ಕರೆದು ಚರ್ಚೆ ಮಾಡಿದ್ದಾರೆ. ಸಚಿವರ ಜನಪರ ಕಾಳಜಿ, ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆಯಷ್ಟೇ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಸುರ್ಜೆವಾಲಾ ಅವರು ಸಚಿವರು, ಶಾಸಕರನ್ನು ಭೇಟಿಯಾಗುತ್ತಿದ್ದಾರೆ. ಇದಕ್ಕೆ ಮೌಲ್ಯಮಾಪನ ಅಂತಾ ಹೇಳಲು ಬರುವುದಿಲ್ಲ. ನಮ್ಮನ್ನೆಲ್ಲಾ ಕರೆದು ಇಲಾಖೆಗಳ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನಷ್ಟೇ ಸಂಗ್ರಹಿಸಿದ್ದಾರೆ ಎಂದರು.
ಸೆಪ್ಟೆಂಬರ್ನಲ್ಲಿ ಕ್ರಾಂತಿ ಆಗುತ್ತದೆ ಎಂಬ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಮ್ಮದು ಹೈಕಮಾಂಡ್ ಮಾತು ಕೇಳುವ ಪಕ್ಷ, ಸಿಎಂ, ಡಿಸಿಎಂ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ನಾನು ಹೇಳಲು ಬಯಸುವುದಿಲ್ಲ ಎಂದರು.
ರೈತರ ಹಿತದೃಷ್ಟಿಯಿಂದ ಕ್ರಮ
ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ (ಬಿಡಿಸಿಸಿ) ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವೆ, ಜಿಲ್ಲೆಯ ರೈತರ ಹಿತಾಸಕ್ತಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಹಿರಿಯರಾದ ಪ್ರಭಾಕರ್ ಕೋರೆ ಸೇರಿದಂತೆ ಎಲ್ಲರೂ ಒಂದು ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಸಹೋದರ ಚನ್ನರಾಜ್ ಹಟ್ಟಿಹೊಳಿ ಸ್ವತಂತ್ರ ನಾಯಕ
ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ಖಾನಾಪುರ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಹೋದರ ಚನ್ನರಾಜ್ ಹಟ್ಟಿಹೊಳಿ, ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರಿಗೆ ಸ್ವತಂತ್ರವಿದೆ. ಎಲ್ಲಿ ಬೇಕಾದರೂ ಸಕ್ರಿಯವಾಗಿ ಓಡಾಡಬಹುದು ಎಂದರು.
ಐರಾ ಪ್ರೋಡಕ್ಷನ್ನಿಂದ ೨ ಚಿತ್ರಗಳು
ಒಂದೂವರೆ ವರ್ಷಗಳ ಹಿಂದೆ ಐರಾ ಪ್ರೋಡಕ್ಷನ್ ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದು, ಈಗಾಗಲೇ ಎರಡು ಚಿತ್ರಗಳ ಚಿತ್ರಿಕರಣ ನಡೆಯುತ್ತಿದ್ದು, ಈ ಬಗ್ಗೆ ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.