ಬೆಳಗಾವಿ: ಕಳೆದ ಒಂದು ವಾರದಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಭಾನುವಾರ ಒಂದೇ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೀಡಿ ಚಾಲನೆ ನೀಡಿದ್ದಾರೆ.
ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿದ ಸಚಿವರು, ಸಂಪರ್ಕ ರಸ್ತೆ ಕಾಮಗಾರಿಗೂ ಚಾಲನೆ ನೀಡಿದರು. ನಂತರ ಸ್ಥಳೀಯ ಮರಾಠಿ ಶಾಲೆಗೆ ಹೆಚ್ಚಿನ ಕೊಠಡಿಗಳ ನಿರ್ಮಾಣ ಕಾಮಗಾರಿಗೂ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕೆಲವರ ಭಾಷಣ ಕೇಳಿದ್ದೀರಿ, ಅವರು ಧರ್ಮ ಧರ್ಮ ಎಂದು ಅಬ್ಬರಿಸುತ್ತಾರೆ. ಅವರದ್ದು ಕೇವಲ ಭಾಷಣದಲ್ಲಿ ಮಾತ್ರ ಧರ್ಮವಿರುತ್ತದೆ. ಆದರೆ ನನ್ನ ಧರ್ಮಾಚರಣೆ ಕೇವಲ ಭಾಷಣಕ್ಕೆ ಸೀಮಿತವಲ್ಲ, ನನ್ನದು ನಿಜವಾದ ಆಚರಣೆಯಲ್ಲಿ ಧರ್ಮವಿದೆ. ಧರ್ಮದಿಂದ ಕೆಲಸ ಮಾಡುತ್ತಿದ್ದೇನೆ, ಧರ್ಮದ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಿರಂತರವಾಗಿ ಒಂದಿಲ್ಲೊಂದು ಊರಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದನ್ನು ನೀವೆಲ್ಲ ನೋಡುತ್ತಿದ್ದೀರಿ. ಒಂದು ಊರಲ್ಲಿ ಶಂಕುಸ್ಥಾಪನೆ ನಡೆಸಿದರೆ, ಮತ್ತೊಂದು ಊರಲ್ಲಿ ಉದ್ಘಾಟನೆ ನಡೆಸುತ್ತಿದ್ದೇನೆ. ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಮ್ಮ ಸರಕಾರ ಇರಲಿ, ಇಲ್ಲದಿರಲಿ, ವಿರೋಧ ಪಕ್ಷದಲ್ಲಿದ್ದಾಗಲೂ ಅಭಿವೃದ್ಧಿ ಕೆಲಸ ಬಿಟ್ಟಿಲ್ಲ ಎಂದು ಹೆಹ್ಹಾಳಕರ್ ತಿಳಿಸಿದರು.
ಒಬ್ಬ ಮಹಿಳೆಯ ಮೇಲೆ ವಿಶ್ವಾಸವಿಟ್ಟು ಶಾಸಕಿಯಾಗಿ ಆಯ್ಕೆ ಮಾಡಿ ಕಳಿಸಿದ್ದೀರಿ, ನಿಮ್ಮ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ಕ್ಷೇತ್ರದ ಹೆಸರನ್ನು ರಾಜ್ಯಾದ್ಯಂತ ಬೆಳಗುವಂತೆ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಪಕ್ಷ ಭೇದ ಮರೆತು ಸೇವೆ ಮಾಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಒಂದೇ ಒಂದು ರೂಪಾಯಿ ಮಧ್ಯವರ್ತಿಗಳ ಪಾಲಿಲ್ಲದೆ, ಯಾವುದೇ ಗೊಂದಲವಿಲ್ಲದೆ ವರ್ಷಕ್ಕೆ 34 ಸಾವಿರ ಕೋಟಿ ರೂ ಮೊತ್ತದ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗುತ್ತಿದೆ. ನಿಮ್ಮ ಮನೆ ಬಾಗಿಲಿಗೆ ಹಣ ಬರುತ್ತಿದೆ. ಇಂತಹ ದೊಡ್ಡ ಯೋಜನೆ ಜಾರಿಗೊಳಿಸುವ ಭಾಗ್ಯ, ಏಳೂವರೆ ಕೋಟಿ ಜನರಲ್ಲಿ ಒಬ್ಬಳೇ ಒಬ್ಬ ಮಹಿಳೆ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಇನಾಮ ಬಡಸ್ ಗ್ರಾಮದಲ್ಲಿ ಸುಮಾರು 20 ಲಕ್ಷ ರೂ,ಗಳ ವೆಚ್ಚದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು.
ಸಮಾಜದ ಶ್ರೇಷ್ಠತೆಯ ಸಂಕೇತವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಭವನ ನಿರ್ಮಾಣವಾಗುತ್ತಿದೆ. ಈ ಭವನದಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೆ ನೂರಾರು ಉಪಯುಕ್ತ ಕಾರ್ಯಕ್ರಮಗಳು ನಡೆಸುವ ಅವಕಾಶ ಸಿಗಬೇಕೆಂಬುದು ನನ್ನ ಆಶಯ ಎಂದು ಸಚಿವರು ಹೇಳಿದರು.
ನಂತರ, ಗ್ರಾಮದ ದುರ್ಗಪ್ಪ ಪಾಟೀಲ ಇವರ ಮನೆಯಿಂದ ಶ್ರೀ ಕಲ್ಮೇಶ್ವರ ದೇವಸ್ಥಾನದ ಸಂಪರ್ಕ ಕಲಿಸುವ ರಸ್ತೆ ನಿರ್ಮಾಣದ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. 30 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಗುಣಮಟ್ಟದ ರಸ್ತೆ ನಿರ್ಮಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲು ಗುತ್ತಿಗೆದಾರರಿಗೆ ಸೂಚಿಸಿದರು.
ಇದಾದ ನಂತರ, ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು.
ಸುಮಾರು 42.28 ಲಕ್ಷ ರೂ,ಗಳ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣದ ಕಾಮಗಾರಿ ನಡೆಯಲಿದೆ. ಕ್ಷೇತ್ರದ ಶಿಕ್ಷಣದ ಅಭಿವೃದ್ಧಿಗಾಗಿ ಪ್ರಯತ್ನ ಮೀರಿ ಅನುದಾನ ತರಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ನೂರಾರು ಸರ್ಕಾರಿ ಶಾಲೆಗಳ ನವೀಕರಣ ಜೊತೆಗೆ ಮೂಲಸೌಕರ್ಯ ಒದಗಿಸಿದ್ದೇನೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಯುವರಾಜ ಕದಂ, ಮನೋಹರ್ ಬೆಳಗಾಂವ್ಕರ್, ನಾರಾಯಣ ಪಾಟೀಲ, ಸಾಗರ ತೋರಾಳಕರ್, ಲಕ್ಷ್ಮಣ ಪಾಟೀಲ, ಗಿತೇಶ್ ತಾನಾಬ್, ಶಿವಾಜಿ ಪಾಟೀಲ, ಶಿವಾಜಿ ತಾನಾಬ್, ಜಯಪ್ಪ ಪಾಟೀಲ, ಕೃಷ್ಣ ಗಡಕರಿ, ಕೃಷ್ಣ ಕಾಂಬಳೆ, ರಾಮು ಪಾಟೀಲ, ಕೃಷ್ಣ ಪಾಟೀಲ, ಭರಮಣ್ಣ ಕಾಂಬಳೆ, ಮಾರುತಿ ಕಾಂಬಳೆ, ಶಾಲಾ ಸಿಬ್ಬಂದಿ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.