This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬೆಳಗಾವಿಯಲ್ಲಿ ಸಿರಿಧಾನ್ಯ-ಸಾವಯವ ಮೇಳಕ್ಕೆ ಸಚಿವ ಗೋವಿಂದ ಕಾರಜೋಳ ಚಾಲನೆ Minister Govinda Karajola drives for cereal-organic fair in Belgaum


 

ಬೆಳಗಾವಿ :
ಪಾಶ್ಚಿಮಾತ್ಯ ದೇಶಗಳ ಆಹಾರ ಪದ್ಧತಿ ಅನುಕರಣೆಯಿಂದ ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮತ್ತಿತರ ರೋಗಗಳಿಂದ ನಾವು ಬಳಲುತ್ತಿದ್ದೇವೆ. ಆದ್ದರಿಂದ ಸಿರಿಧಾನ್ಯ ಹಾಗೂ ಸಾವಯವ ದೇಶೀಯ ಆಹಾರ ಸೇವನೆಯ ಮೂಲಕ ಆರೋಗ್ಯ ‌ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕರೆ ನೀಡಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಹಾಗೂ ಕೃಷಿ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ಯಾವುದೇ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರವನ್ನು ಬಳಸದೇ ಎಲ್ಲ ಬೆಳೆಗಳನ್ನು ಬೆಳೆಯುತ್ತಿದ್ದರು. ಇದರಿಂದ ಅಂದಿನ ಜನರು ಆರೋಗ್ಯವಾಗಿದ್ದರು. ವಿದ್ಯೆ ಹೆಚ್ಚಾದಂತೆ ದೇಶಿಯ ಪದ್ಧತಿ ಹಾಗೂ ದೇಶಿಯ ಆಹಾರ ಪದ್ಧತಿ ಬಿಟ್ಟು ನಾವೆಲ್ಲರೂ ಕೂಡ ಪರಕೀಯರ ಪದ್ಧತಿ ಅನುಕರಣೆ ಮಾಡುತ್ತಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗಿದ್ದೇವೆ. ಇದರಿಂದ ಹೊರಬಂದು ದೇಶಿಯ ಔಷಧಿ ಪದ್ಧತಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಹೇಳಿದರು.

ನಮ್ಮ ಪೂರ್ವಜರು ಸ್ವತ ತಾವೇ ಆಹಾರಧಾನ್ಯಗಳನ್ನು ಸೇವಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬೆಳೆದಂತಹ ಬೆಳೆಗಳನ್ನು ಮಾರಾಟ ಮಾಡಿ ಪಿಜ್ಜಾ, ಬರ್ಗರ್ ತಿನ್ನುವ ಪರಿಸ್ಥಿತಿ ಬಂದಿದೆ. ಆರೋಗ್ಯ ದೃಷ್ಟಿಯಿಂದ ಎಲ್ಲರೂ ಜಾಗೃತಗೊಂಡು ನಮ್ಮ ಪೂರ್ವಜರ ಆಹಾರ ಪದ್ಧತಿಯನ್ನು ಅನುಕರಣೆ ಮಾಡಬೇಕು.
ರೈತರು ಸಿರಿಧಾನ್ಯ ಹಾಗೂ ಸಾವಯವ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೂಲಕ ದೇಶದ ನಿಜವಾದ ಅನ್ನದಾತರಾಗಬೇಕು ಎಂದರು.

ಆಹಾರದಿಂದಲೇ ಆರೋಗ್ಯ ಎಂಬ ಸತ್ಯವನ್ನು ಅರಿತುಕೊಂಡು ಇಡೀ ದೇಶದಲ್ಲಿ ಇವತ್ತು ಸಿರಿಧಾನ್ಯ ಮತ್ತು ಸಾವಯವ ವರ್ಷವನ್ನಾಗಿ ಆಚರಣೆ ಮಾಡಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಾರೆ.
ಜನರು ಕೂಡ ಸತ್ಯವನ್ನು ಅರಿತುಕೊಂಡು ಉತ್ತಮ ದೇಶೀಯ ‌ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಕರೆ ನೀಡಿದರು.

ಹಳ್ಳಿಗಳಿಂದಲೇ ನಮ್ಮ ಜನರ ಬದುಕು ಹಸನಾಗಬೇಕು. ಗ್ರಾಮೀಣ ಉದ್ಯೋಗಕ್ಕೆ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳು ಜನ ವಿದ್ಯಾಭ್ಯಾಸ ಪಡೆಯಬೇಕು; ಉನ್ನತ ಪದವಿ ಹೊಂದಬೇಕು ಎಂಬ ಆಶಯದಿಂದ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸುವ ಮೂಲಕ ಅನೇಕ ರೈತರ ಮಕ್ಕಳಿಗೆ ಅನುಕೂಲ ಮಾಡಿದ್ದಾರೆ ಎಂದು ಸಚಿವ ಕಾರಜೋಳ ಹೇಳಿದರು.

ಪ್ರಾದೇಶಿಕ ಆಯುಕ್ತ ಎಂ ಜಿ. ಹಿರೇಮಠ, ಜಿಲ್ಲಾಧಿಕಾರಿ ನಿತೀಶ್ ಕೆ. ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್. ವಿ, ಕೃಷಿಕ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ಟಿ.ಎಸ್. ಮೋರೆ, ಕೃಷಿಕ ಸಮಾಜದ ಬೆಂಗಳೂರಿನ ವಿಭಾಗೀಯ ಕಾರ್ಯಕಾರಿ ಸದಸ್ಯ ನಾರಾಯಣ ಚ. ಕಲಾಲ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್ ಪಾಟೀಲ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ರೈತರು, ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ರೈತರನ್ನು ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಹಾಗೂ ದೇಶಿಯ ಆಹಾರ ಮಳಿಗೆಗಳನ್ನು ವೀಕ್ಷಿಸಿ ಸಿರಿಧಾನ್ಯದ ಆಹಾರಗಳ ಸವಿರುಚಿಯನ್ನು ಸವಿದರು.

ಬೆಳಗಾವಿಯ ಸರದಾರ ಹೈಸ್ಕೂಲ್ ಮೈದಾನದಲ್ಲಿ ಸಿರಿಧಾನ್ಯ ಹಾಗೂ ಸಾವಯವ ಮೇಳವು ಜನವರಿ 26 ಹಾಗೂ 27 ರಂದು ಎರಡು ದಿನಗಳ ಕಾಲ ನಡೆಯಲಿದೆ.
ವಿವಿಧ ಬಗೆಯ ಸಿರಿಧಾನ್ಯಗಳ ಮತ್ತು ಸಾವಯವ ಆಹಾರ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.


Jana Jeevala
the authorJana Jeevala

Leave a Reply