ಬೆಳಗಾವಿ :
ವಿದ್ಯಾರ್ಥಿಗಳು ಕೋರ್ಸ್ ಹಾಗೂ ತರಬೇತಿ ಪೂರ್ಣಗೊಳಿಸಿದ ಬಳಿಕ ಉದ್ಯೋಗ ಸಿಗುವಂತೆ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ಕೌಶಲ್ಯಾಭಿವೃದ್ದಿ ತರಬೇತಿ ನೀಡುವುದರ ಜೊತೆಗೆ ಉದ್ಯೋಗ ಸಿಗುವಂತೆ ಕ್ಯಾಂಪಸ್ ಸಂದರ್ಶನಗಳನ್ನು ಸಹ ನಡೆಸಬೇಕು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ (ನ.04) ನಡೆದ ಬೆಳಗಾವಿ ಜಿಲ್ಲೆಯ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಹೆಚ್ಚಾಗಿ ತಲುಪಿಸುವ ಅಗತ್ಯವಿದೆ.
ಗ್ರಾಮ ಪಂಚಾಯತಿಗಳಲ್ಲಿ ಗುರಿ ನಿಗದಿಪಡಿಸಿ ಯೋಜನಾ ಅನುಷ್ಟಾನಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸೂಚಿಸಬೇಕು. ಐಟಿಐ, ಜಿಟಿಟಿಸಿ ಗಳಲ್ಲಿ ಹೆಚ್ಚಿನ ವೃತ್ತಿಪರ ಕೋರ್ಸುಗಳ ಪ್ರಾರಂಭಕ್ಕೆ ಒತ್ತು ನೀಡಬೇಕು. ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವೃತ್ತಿ ತರಬೇತಿ ನೀಡಬೇಕು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ತಿಳಿಸಿದರು.
ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೆ ಹೋಲಿಸಿದರೆ ಐಟಿಐ ಕೋರ್ಸ್ ಗಳಿಗೆ ಉದ್ಯೋಗಾವಕಾಶ ಬಹಳಷ್ಟಿವೆ. ವೃತ್ತಿ ತರಬೇತಿ ಕೋರ್ಸ್ ಗಳಿಗೆ ಹೆಚ್ಚಿನ ಸಂಖ್ಯೆಲ್ಲಿ ವಿಧ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಜಿಟಿಟಿಸಿ ಗಳಲ್ಲಿ ವಿವಿಧ ಕೋರ್ಸ್ ಗಳನ್ನು ಈಗಾಗಲೇ ಪ್ರಾರಂಭ ಮಾಡಲಾಗಿದೆ. ಡಿಪ್ಲೋಮಾ ಇನ್ ರೊಬೋಟಿಕ್ಸ್ ಅತೀ ಮಹತ್ವದ ಕೋರ್ಸ್ ಸೇರಿದಂತೆ ಸುಮಾರು 28 ವಿವಿಧ ಕೋರ್ಸುಗಳು ಪ್ರಾರಂಭಿಸಲಾಗಿದೆ ಎಂದು ಜಿಟಿಟಿಸಿ ಪ್ರಾಂಶುಪಾಲ ಪ್ರೊ.ಮೊಗೇರ ಅವರು ತಿಳಿಸಿದರು.
ವರ್ಷಕ್ಕೆ ಸುಮಾರು 1 ಸಾವಿರ ವಿದ್ಯಾರ್ಥಿಗಳಿಗೆ ಮೇಲ್ಪಟ್ಟು ತರಬೇತಿ ನೀಡಲಾಗುತ್ತಿದೆ. ರೊಬೋಟಿಕ್ಸ್ ಕೋರ್ಸ್ ಪೂರ್ಣಗೊಳಿಸಿದ ಅನೇಕ ವಿಧ್ಯಾರ್ಥಿಗಳು ಸ್ವಯಂ ಉದ್ಯೋಗ ಕೈಗೊಂಡು, ವಿವಿಧ ಕಂಪನಿಗಳಲ್ಲಿ ಉದ್ಯೋಗ ದೊರೆತಿವೆ. ಎಸ್.ಸಿ.ಪಿ- ಟಿ.ಎಸ್.ಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಟೂಲ್ಸ್ ಕಿಟ್, ಸ್ಟೈಫಂಡ್ ಕೂಡ ನೀಡಲಾಗುತ್ತಿದೆ. ಎಂದು ಜಿಟಿಟಿಸಿ ಪ್ರಾಂಶುಪಾಲರು ವಿವರಿಸಿದರು.
ಪಿಎಂ ಸ್ವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ ಬೀದಿ ಬದಿ ವ್ಯಾಪಾರಿಗಳಿಗೆ ಮೂರು ಕಂತುಗಳಲ್ಲಿ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದು ಮರಳಿ ಪಾವತಿಸುವ ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗುವುದು ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವ್ಯವಸ್ಥಾಪಕ ಡಾ. ಸಂಜೀವ ತಿಗಣಿ ಅವರು ವಿವರಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಕೈಗಾರಿಕಾ ಮತ್ತು ವೃತ್ತಿ ತರಬೇತಿ ಕೇಂದ್ರದ ಪ್ರಭಾರ ಜಂಟಿ ನಿರ್ದೇಶಕ ಡಾ. ಬಸವಪ್ರಭು ಹಿರೇಮಠ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಚಿದಾನಂದ ಬಾಕೆ ಸೇರಿದಂತೆ ಮತ್ತಿತರ ಅಧಿಕಾರಿಗಳು, ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.