ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ `ಜ್ಞಾನದೇಗುಲವಿದು ಕೈಮುಗಿದು ಒಳಗೆ ಬನ್ನಿ’ ಎಂಬ ಘೋಷವಾಕ್ಯ ತೆಗೆದುಹಾಕುವ ಯಾವುದೇ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಘೋಷವಾಕ್ಯ ಬದಲಾವಣೆ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ ಸರ್ಕಾರ, ಪ್ರಸ್ತುತ ಇರುವ ಘೋಷವಾಕ್ಯ ತೆಗೆದುಹಾಕುವ ಆದೇಶ ನೀಡಿಲ್ಲ ಎಂದು ಸಚಿವ ಮಹಾದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಜ್ಞಾನ ದೇಗುಲವಿದು ಎಂಬ ಘೋಷವಾಕ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಈಗ ಪ್ರಸ್ತುತ ಇರುವ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶ ಹೊರಡಿಸಲಾಗಿಲ್ಲ. ಆದರೆ, ಸೃಜನಾತ್ಮಕ ಕಲಿಕೆಯ ದೃಷ್ಟಿಯಿಂದ, ಮಕ್ಕಳಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕ ಯೋಚನಾ ಶಕ್ತಿ ಬೆಳೆಸುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದ ಗುಂಪಿನಲ್ಲಿ ಚರ್ಚೆಯ ನಡೆಸಿದ್ದು, ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ ಎಂದು ಶಾಲೆಗಳಲ್ಲಿ ಹಾಕಿದರೆ ಹೇಗೆ? ಎಂಬ ಆಲೋಚನೆಯನ್ನು ಕೆಲವರು ಮುಂದಿಟ್ಟಾಗ, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತಮ ಆಲೋಚನೆಯನ್ನು ಹೊಂದಿದ ಈ ಸಾಲನ್ನು ಕೆಲವರು ಶಾಲೆಗಳಲ್ಲೂ ಬಳಸಿರುತ್ತಾರೆ. ಅಂದಹಾಗೆ ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ ಎಂದರೆ ಅದು ಕುವೆಂಪು ಅವರು ಹೇಳುವ ವಿಚಾರ ಕ್ರಾಂತಿಗೆ ಆಹ್ವಾನ ಪ್ರಬಂಧದ ಆಶಯವೇ ಆಗಿದ್ದು ಕುವೆಂಪು ಅವರಿಗೆ ಅವಮಾನ ಎಸಗುವ ಯಾವುದೇ ಪ್ರಮಾದವು ನಡೆದಿಲ್ಲ ಎಂದು ಹೇಳಿದ್ದಾರೆ.
ಶಿಕ್ಷಣದ ಉದ್ದೇಶ ಮಕ್ಕಳಲ್ಲಿ ವೈಚಾರಿಕತೆಯ ಜೊತೆಗೆ, ಪ್ರಶ್ನಿಸುವ ಸಾಮರ್ಥ್ಯ ಬೆಳೆಸುವುದಾಗಿದೆ. ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್ ಸ್ಟೀನ್ ನಿಂದ ಹಿಡಿದು ಬಹಳಷ್ಟು ವಿಜ್ಞಾನಿಗಳು ಇದನ್ನೇ ಪ್ರತಿಪಾದಿಸಿದ್ದು, ಕಲಿಯುವ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಆಲೋಚನೆಗಳನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ನನ್ನ ಪ್ರಕಾರ ಇದೊಂದು ವಿವಾದದ ಅಂಶವೇ ಅಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.