ಬೆಳಗಾವಿ :
ಬೆಳಗಾವಿಯಲ್ಲಿ ಸೀರೆ ಕಳ್ಳರು ಅಂಗಡಿಯ ಕೆಲಸಗಾರರನ್ನೇ ವಂಚಿಸಿ ಸೀರೆ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಖಡೇ ಬಜಾರ್ ವಿರೂಪಾಕ್ಷಿ ಸಾಡಿ ಸೆಂಟರ್ ಗೆ
ಶುಕ್ರವಾರ ಮಧ್ಯಾಹ್ನ
ಪ್ರತ್ಯೇಕವಾಗಿ ಬಂದ ಪುರುಷ, ಮಹಿಳೆಯರು ಲಕ್ಷಾಂತರ ಮೌಲ್ಯದ ಸೀರೆಗಳನ್ನು ಅಂಗಡಿಯವರ ಗಮನ ಬೇರೆಡೆ ಸೆಳೆದು ಪರಾರಿಯಾಗಿದ್ದಾರೆ. ಒಟ್ಟು ಏಳು ಜನ ಇದರಲ್ಲಿ ಭಾಗಿಯಾಗಿದ್ದಾರೆ. ಒಬ್ಬ ಪುರುಷ ಹಾಗೂ ಆರು ಜನ ಮಹಿಳೆಯರು ಇದ್ದಾರೆ. ಆರಂಭದಲ್ಲಿ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರು ಅಂಗಡಿಗೆ ಬಂದಿದ್ದಾರೆ. ನಂತರದ ಸರದಿಯಲ್ಲಿ ಮತ್ತೆ ಮೂವರು ಮಹಿಳೆಯರು ಬಂದಿದ್ದಾರೆ. ಆದರೆ ಇವರು ತಾವೆಲ್ಲ ಅಪರಿಚಿತರಂತೆ ನಟಿಸಿದ್ದಾರೆ. ಬೇರೆ ಬೇರೆಯಾಗಿಯೇ ಸೀರೆಗಳನ್ನು ಖರೀದಿಸಲು ಇವರು ನಾಟಕ ಮಾಡಿದ್ದಾರೆ. ಮೂವರು ಮಹಿಳೆಯರು ಅಡ್ಡವಾಗಿ ನಿಂತು ಮಹಿಳೆಯೊಬ್ಬಳಿಗೆ ಸೀರೆ ಪ್ಯಾಕ್ ಗಳನ್ನು ತನ್ನ ಸೀರೆಯ ಸೆರಗಿನಲ್ಲಿ ಹಾಕುವಲ್ಲಿ ನೆರವಾಗಿದ್ದಾರೆ.
ನಂತರ ಇವರಷ್ಟು ಜನ ತಮಗೆ ಸೀರೆ ಒಪ್ಪಿಗೆಯಾಗಿಲ್ಲ ಎಂದು ಹೊರ ನಡೆದಿದ್ದಾರೆ. ನಂತರ ಅಂಗಡಿಕಾರರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ನೋಡಿದಾಗ ಇವರೆಲ್ಲರ ಕೃತ್ಯ ಬೆಳಕಿಗೆ ಬಂದಿದೆ.
ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ 8 ಕಾಂಚಿಪುರಂ ಸೀರೆ, ಒಂದು ಇಳಕಲ್ ಸೀರೆ ಕದ್ದೊಯ್ದಿದ್ದಾರೆ. ಸಿಸಿಟಿವಿಯಲ್ಲಿ ಇವರೆಲ್ಲರ ಮುಖ ಸ್ಪಷ್ಟವಾಗಿ ಗೋಚರವಾಗಿದ್ದು ಖಡೇ ಬಜಾರ ಪೊಲೀಸರು ಇವರ ಪತ್ತೆಗೆ ಬಲೆ ಬೀಸಿದ್ದಾರೆ.