ಹಾವೇರಿ :
ಹಾವೇರಿಯಲ್ಲಿ ಜ.6 ರಿಂದ ಆರಂಭವಾಗುವ ಸಾಹಿತ್ಯ ಸಮ್ಮೇಳನದ ಉದ್ಘಾಟನೆ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಯ ಪರಿಪಾಲನೆಯ ಪರಂಪರೆಗೆ ಸಾಹಿತ್ಯ ಪರಿಷತ್ತು ಒತ್ತು ನೀಡಿದೆ. ಸಮಯ ಮಿತಿ ಮೀರುವ ಭಾಷಣಕಾರರಿಗೆ ಕೆಂಪು ದೀಪದ ಎಚ್ಚರಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೆಂಪು ದೀಪದ ಎಚ್ಚರಿಕೆ ಮರೆತು ಮಾತನಾಡಿದರೆ ಸ್ವಯಂ ಚಾಲಿತವಾಗಿ ಮೈಕ್ ಆಫ್ ಆಗಲಿದೆ. ಆಮಂತ್ರಣ ಪತ್ರಿಕೆಯಲ್ಲಿ ಗಣ್ಯರು, ಭಾಷಣಕಾರರು, ಸಾಹಿತಿಗಳಿಗೆ ಸಮಯವಕಾಶ ನೀಡಲಾಗಿದೆ.
ಹಾವೇರಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವ ಸಾಹಿತಿ ದೊಡ್ಡರಂಗೇಗೌಡ ಅವರಿಗೆ ಇಡೀ ಸಮ್ಮೇಳನದಲ್ಲಿ ಗರಿಷ್ಠ 45 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ. ಸಮ್ಮೇಳನ ಉದ್ಘಾಟಿಸುವ ಮುಖ್ಯಮಂತ್ರಿಗಳ ಭಾಷಣಕ್ಕೆ 30 ನಿಮಿಷ, ಇತರ ಗಣ್ಯರಿಗೆ 10 ನಿಮಿಷ, ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷರಿಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ. ನಿಗದಿತ ವೇಳೆಗೆ ಎಲ್ಲಾ ಕಾರ್ಯಕ್ರಮ ಆರಂಭಿಸಿ ಮುಕ್ತಾಯಗೊಳಿಸಲು ಪರಿಷತ್ತು ನಿರ್ಧರಿಸಿದೆ. ವೇದಿಕೆಯ ಪೋಡಿಯಂ ಬಳಿ ಭಾಷಣಕಾರರಿಗೆ ಕಾಣುವಂತೆ ಕೆಂಪು ದೀಪ ಅಳವಡಿಸಲಾಗಿದೆ. ಕೊಟ್ಟಿರುವ ಸಮಯ ಮುಗಿಯುವ ಎರಡು ನಿಮಿಷ ಮೊದಲು ಕೆಂಪು ದೀಪ ಹೊತ್ತಿಕೊಳ್ಳಲಿದೆ. ಒಂದು ನಿಮಿಷ ಬಾಕಿ ಇರುವಂತೆ ಮತ್ತೊಮ್ಮೆ ಕೆಂಪು ದೀಪ ಉರಿದು ಸಮಯ ಮುಗಿದಿರುವ ಸೂಚನೆ ಬರುತ್ತದೆ. ತಕ್ಷಣ ಸ್ವಯಂ ಚಾಲಿತವಾಗಿ ಮೈಕ್ ಆಫ್ ಆಗಲಿದೆ.