ನವದೆಹಲಿ : ಭಾರತ ಹವಾಮಾನ ಇಲಾಖೆ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಆಗಸ್ಟ್ ಅಂತ್ಯದ ವೇಳೆಗೆ ಅನುಕೂಲಕರವಾದ ಲಾ ನಿನಾ ಪರಿಸ್ಥಿತಿಗಳು ಅಭಿವೃದ್ಧಿಗೊಳ್ಳುವ ಬಲವಾದ ಸಾಧ್ಯತೆ ಇದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ಮಳೆ ದೀರ್ಘಾವಧಿಯ ಸರಾಸರಿ 422.8 ಮಿಮೀ ಮಳೆ(ವಾಡಿಕೆ ಮಳೆ)ಯ 106 ರಷ್ಟು ಇರುತ್ತದೆ ಎಂದು ಐಎಂಡಿ (IMD) ಹೇಳಿದೆ.
ಭಾರತದ ಕೃಷಿ ಕ್ಷೇತ್ರಕ್ಕೆ ಮಾನ್ಸೂನ್ ಅತ್ಯಗತ್ಯ, ಏಕೆಂದರೆ ನಿವ್ವಳ ಕೃಷಿ ಪ್ರದೇಶದ 52%ರಷ್ಟು ಅದರ ಮೇಲೆ ಅವಲಂಬಿತವಾಗಿದೆ. ದೇಶಾದ್ಯಂತ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಜಲಾಶಯಗಳನ್ನು ಮರುಪೂರಣಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ದೇಶದಲ್ಲಿ ಈವರೆಗೆ 453.8 ಮಿಮೀ ಮಳೆ
ಜೂನ್ 1 ರಿಂದ ಈವರೆಗೆ ಭಾರತವು 453.8 ಮಿಮೀ ಮಳೆಯನ್ನು ದಾಖಲಿಸಿದೆ, ಇದು ಜೂನ್ 1 ರಿಂದ ಈವರೆಗೆ ವಾಡಿಕೆ ಮಳೆಯಾದ 445.8 ಮಿಮೀಗಿಂತ 2%ರಷ್ಟು ಹೆಚ್ಚಾಗಿದೆ. ಭಾರತ ಹವಾಮಾನ ಇಲಾಖೆ (IMD) ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ.
ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಐಎಂಡಿ (IMD) ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ಅವರು, ಈಶಾನ್ಯ ಭಾಗಗಳು, ಪೂರ್ವ ಭಾರತ, ಲಡಾಖ್, ಸೌರಾಷ್ಟ್ರ, ಕಚ್ ಮತ್ತು ಮಧ್ಯ ಮತ್ತು ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು ಎಂದು ತಿಳಿಸಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಪಶ್ಚಿಮ ಹಿಮಾಲಯದ ಕೆಲವು ಭಾಗಗಳಲ್ಲಿ ಮಳೆ ಕೊರತೆಯಾಗಲಿದೆ ಎಂದು ಮೊಹಾಪಾತ್ರ ಮುನ್ಸೂಚನೆ ನೀಡಿದ್ದಾರೆ.
ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವನ್ನು ನಿರೀಕ್ಷಿಸಲಾಗಿದೆ, ಗಂಗಾ ಬಯಲು ಪ್ರದೇಶಗಳು, ಮಧ್ಯ ಭಾರತ ಮತ್ತು ಆಗ್ನೇಯ ಕರಾವಳಿಯ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಗರಿಷ್ಠ ತಾಪಮಾನವನ್ನು ನಿರೀಕ್ಷಿಸಲಾಗಿದೆ ಎಂದು ಮೊಹಾಪಾತ್ರ ಹೇಳಿದರು.
ಜುಲೈನಲ್ಲಿ ವಾಡಿಕೆಗಿಂತ 9%ರಷ್ಟು ಹೆಚ್ಚು ಮಳೆ
ಜುಲೈನಲ್ಲಿ, ಭಾರತದಲ್ಲಿ ವಾಡಿಕೆಗಿಂತ 9%ರಷ್ಟು ಹೆಚ್ಚು ಮಳೆಯಾಗಿದೆ. ಮಧ್ಯ ಭಾರತದಲ್ಲಿ 33%ರಷ್ಟು ಅಧಿಕ ಮಳೆಯಾಗಿದೆ.
ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಪಶ್ಚಿಮ ಬಂಗಾಳ ಮತ್ತು ದೇಶದ ಈಶಾನ್ಯ ಭಾಗಗಳಲ್ಲಿ ಗಮನಾರ್ಹ ಮಳೆಯ ಕೊರತೆ ಕಂಡುಬಂದಿದೆ. ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ 35 ಪ್ರತಿಶತದಿಂದ 45 ಪ್ರತಿಶತದಷ್ಟು ಮಳೆಯ ಕೊರತೆಯಾಗಿದೆ.
ಭಾರತದಲ್ಲಿ ಮಾನ್ಸೂನ್ ಸ್ವಾಭಾವಿಕವಾಗಿ ವಿವಿಧ ನೈಸರ್ಗಿಕ ಅಂಶಗಳಿಂದ ಏರಿಳಿತಗಳು ಮತ್ತು ವ್ಯತ್ಯಾಸಗಳನ್ನು ಕಾಣುತ್ತದೆ. ಹವಾಮಾನ ಬದಲಾವಣೆ(climate change)ಯು ಈ ವ್ಯತ್ಯಾಸವನ್ನು ಹೆಚ್ಚಿಸುತ್ತಿದೆ ಎಂದು ಸಂಶೋಧನೆ ಸೂಚಿಸುತ್ತದೆ, ಇದು ಹೆಚ್ಚು ತೀವ್ರವಾದ ಹವಾಮಾನ ಘಟನೆಗಳಿಗೆ ಕಾರಣವಾಗುತ್ತಿದೆ.