ಬೆಳಗಾವಿ : ತರಾತುರಿಯಲ್ಲಿ ಯಾರೊಬ್ಬರು ಮಕ್ಕಳಿಗೆ ಬೋಧಿಸುವಂತಾಗಬಾರದು. ಪ್ರತಿಯೊಬ್ಬ ಶಿಕ್ಷಕ ಅಧ್ಯಯನ ಶೀಲರಾಗಿ ಬೋಧಿಸಿದರೆ ಅಂತಹ ಶಿಕ್ಷಕನಿಗೆ ಯಾವ ವಿದ್ಯಾರ್ಥಿಯು ಗೌರವ ಸಲ್ಲಿಸದೇ ಇರಲು ಸಾಧ್ಯವೇ ಇಲ್ಲ. ಶಿಕ್ಷಕ ಪ್ರಾಮಾಣಿಕನಾಗಿದ್ದು ಸಮಯಪ್ರಜ್ಞೆ, ಶಿಸ್ತು,ತ್ಯಾಗ ಹಾಗೂ ಇನ್ನಿತರ ಉದಾತ್ತ ಧ್ಯೇಯಗಳನ್ನು ಇಟ್ಟುಕೊಂಡು ಶಿಕ್ಷಣ ನೀಡಿದರೆ ಅದು ಅವನನ್ನು ಉತ್ತುಂಗಕ್ಕೆ ಒಯ್ಯುತ್ತದೆ ಎಂದು ಕೆ.ಎಲ್.ಇ ಆಜೀವ ಸದಸ್ಯ ಮಹಾದೇವ ಬಳಿಗಾರ ಹೇಳಿದರು.
ಜಿ.ಎ.ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಸರ್ವಪಲ್ಲಿ ರಾಧಾಕೃಷ್ಣನ್ಆವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಶಿಕ್ಷಕರಾದವರು ಅತ್ಯಂತ ನಿಷ್ಠಾವಂತರು, ಸತ್ಯವಂತರು ಆಗಿರುತ್ತಿದ್ದರು. ಮಕ್ಕಳಿಗೆ ಶಿಕ್ಷೆಯ ರೂಪದಲ್ಲಿ ಬೋಧಿಸುವ ಕ್ರಮ ಇತ್ತು. ಆದರೆ, ಇಂದು ಜಗತ್ತಿನಲ್ಲಿ ಬದಲಾವಣೆ ಆವರಿಸಿದೆ. ಆದರೂ ಶಿಕ್ಷಕರು ಇಂದು ದೊರೆಯುತ್ತಿರುವ ಜ್ಞಾನಾರ್ಜನೆಯನ್ನು ಬಳಸಿಕೊಂಡು ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಬೋಧಿಸಬೇಕು. ಶಿಕ್ಷಕರು ಒಂದರ್ಥದಲ್ಲಿ ವಿದ್ಯಾರ್ಥಿಗಳೇ ಆಗಿರುತ್ತಾರೆ. ಅವರು ಪಾಠ ಮಾಡುವುದಕ್ಕೂ ಮುನ್ನ ಓದಿಕೊಂಡು ಬಂದು ಮಕ್ಕಳಿಗೆ ಬೋಧಿಸಿದರೆ ಅದಕ್ಕಿಂತ ದೊಡ್ಡ ಲಾಭ ಇನ್ನೊಂದಿಲ್ಲ ಎಂದರು.
ಬೆಳಗಾವಿ ಜಿ.ಎ.ಪ್ರೌಢಶಾಲೆ 108 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ಈ ಶಾಲೆಯನ್ನು ಆರಂಭಿಸಿದವರು ಏಳು ಜನ ಶಿಕ್ಷಕರು ಎನ್ನುವುದು ಬಹಳ ಹೆಮ್ಮೆಯ ಸಂಗತಿ. ಈ ಶಾಲೆಯಿಂದಲೇ ದೇಶಾದ್ಯಂತ ನೂರಾರು ಅಂಗಸಂಸ್ಥೆಗಳು ಹುಟ್ಟಿಕೊಂಡಿವೆ ಎನ್ನುವುದು ಮತ್ತೊಂದು ಹೆಗ್ಗಳಿಕೆ. ಇಂದು ಸಹಾ ನಮ್ಮ ಈ ಶಾಲೆ ತನ್ನದೇ ಆದ ಶೈಕ್ಷಣಿಕ ಹಿರಿಮೆಯನ್ನು ಹೊಂದಿದೆ. ಮಕ್ಕಳಿಗೆ ಮನಮುಟ್ಟುವಂತೆ ಬೋಧಿಸುವ ಅಪಾರ ಜ್ಞಾನವಂತ ಶ್ರೇಷ್ಟ ಶಿಕ್ಷಕರ ಪಡೆಯೇ ಇಲ್ಲಿದೆ. ಮಕ್ಕಳಿಗೆ ಅತ್ಯುತ್ತಮವಾಗಿ ಕಲಿಸಬೇಕೆಂಬ ಅದಮ್ಯ ಹಂಬಲ ಹಾಗೂ ಕನಸು ಹೊಂದಿರುವ ಶಿಕ್ಷಕರು ನಮ್ಮಲ್ಲಿರುವುದು ನಮ್ಮೆಲ್ಲರ ಸೌಭಾಗ್ಯ. ಅವರೆಲ್ಲರೂ ಆಧುನಿಕವಾಗಿ ಅಗತ್ಯವಾಗಿರುವ ಶಿಕ್ಷಣ ಕ್ಷೇತ್ರದ ವಿವಿಧ ಅವಕಾಶಗಳನ್ನು ಮನವರಿಕೆ ಮಾಡಿಕೊಂಡು ತಮ್ಮಲ್ಲಿರುವ ಜ್ಞಾನವನ್ನು ನಿಮ್ಮೆಲ್ಲರಿಗೂ ಮನಮುಟ್ಟುವಂತೆ ಬೋಧಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೀವೆಲ್ಲರೂ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಜತೆ ಜತೆಗೆ ಜೀವನವನ್ನು ಉಜ್ವಲ ಗೊಳಿಸಿಕೊಳ್ಖುವ ದಿಸೆಯಲ್ಲಿ ಓದಬೇಕು. ಭವಿಷ್ಯದಲ್ಲೂ ಜಿ.ಎ.ಪ್ರೌಢಶಾಲೆಯ ಶಿಕ್ಷಕರಿಗೆ ಗೌರವಿಸುವುದನ್ನು ಮರೆಯದೇ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಗಳನ್ನು ಕಟ್ಟುತ್ತಾ ಹೋಗುವುದು ದೊಡ್ಡ ಸಾಧನೆ ಅಲ್ಲ. ಶಿಕ್ಷಣ ದೇಶದ ಬೆನ್ನೆಲುಬು. ಅಂಥ ಶ್ರೇಷ್ಠ ಶಿಕ್ಷಣ ನೀಡುವ ಮೂಲಕ ಶಿಕ್ಷಕರು ಜೀವನಪೂರ್ತಿ ಕೆಲಸ ಮಾಡಿ ತಮ್ಮ ಕಾರ್ಯ ವೈಖರಿಯಿಂದ ಸಂಸ್ಥೆಗೆ ಕೀರ್ತಿ ತರುತ್ತಾರೆ. ಅಂತಹ ಶಿಕ್ಷಕರೇ ಸಂಸ್ಥೆಗಳಿಗೆ ಹೆಮ್ಮೆಯಾಗಿದ್ದಾರೆ. ಅವರನ್ನು ಎಂದಿಗೂ ಮರೆಯುವಂತೆ ಆಗಬಾರದು ಎಂದು ಅವರು ಹೇಳಿದರು.
ವಿಜ್ಞಾನ ತಂತ್ರಜ್ಞಾನಕ್ಕಿಂತ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಹೇಳಿಕೊಡುವ ನೈತಿಕ ಶಿಕ್ಷಣ ಬಹಳ ಮುಖ್ಯ ಎಂದು ಉಪ ಪ್ರಾಚಾರ್ಯ ಸಿ.ಪಿ. ದೇವಋಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿಶೇಷವಾಗಿ ಕಾರ್ಯಕ್ರಮ ನಿರ್ವಹಿಸಿದರು.