ಬೆಳಗಾವಿ :
ಗಡಿನಾಡಿನಲ್ಲಿ ಕನ್ನಡದ ಸೌರಭ ಕಹಳೆ ಮೊಳಗುತ್ತ,ಕನ್ನಡವನ್ನು ಸಶಕ್ತವಾಗಿ ಕಟ್ಟುವ, ಬಿತ್ತರಿಸುವ ಕಾರ್ಯವನ್ನು ಸಂಘ-ಸಂಸ್ಥೆಗಳು, ಶಾಲೆ- ಕಾಲೇಜುಗಳು ನಿರಂತರ ಮಾಡುತ್ತಿರಬೇಕು ಎಂದು ಮಾಳಮಾರುತಿ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಜೆ. ಎಂ. ಕಾಲಿಮಿರ್ಚಿ ಆಶಯ ವ್ಯಕ್ತಪಡಿಸಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ಬಳಗದವರು ಕನ್ನಡ ಕಲರವ ಎಂಬ ವಿನೂತನ
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನವೆಂಬರಲ್ಲಿ ರಾಜ್ಯೋತ್ಸವ ಆಚರಣೆ ಕೇವಲ ನಿಮಿತ್ತವಾದುದು. ಕನ್ನಡದ ಕಲರವ ನಿತ್ಯವೂ ಆಗಬೇಕು. ವಿದ್ಯಾರ್ಥಿಗಳು ನಾಡು ನುಡಿ, ಸಂಸ್ಕೃತಿ, ಪರಂಪರೆಗಳನ್ನು ಮೈಗೂಡಿಸಿಕೊಂಡು ಬರಬೇಕು. ಏಕೆಂದರೆ ನಮ್ಮ ಬದುಕು ಜೆರಾಕ್ಸ್ ಇದ್ದಂತೆ. ನಾವು ಹೇಗೆ
ಬೆಳೆಯುತ್ತೇವೆಯೋ ಹಾಗೆ ಆಗುತ್ತೇವೆ. ನಾವೂ ಆಯ್ಕೆ ಮಾಡುವ ದಾರಿ ಸರಿಯಾಗಿದ್ದಲ್ಲಿ ನಾವು ಮಹಾನ್ ವ್ಯಕ್ತಿಗಳಾಗಲು ಸಾಧ್ಯ. ಕನ್ನಡಕ್ಕಾಗಿ ದುಡಿದ ಅದೆಷ್ಟೋ ಮಹನೀಯರನ್ನು ಕನ್ನಡ ಇಂದಿಗೂ ಅವರನ್ನು ಜೀವಂತವಾಗಿರಿಸಿದೆ. ನಮ್ಮ ಪೂರ್ವಜರು ಅರ್ಥಪೂರ್ಣ ಬದುಕಿಗೆ ಬೇಕಾದ ಅಗಾಧವಾದ ಜ್ಞಾನ ಭಂಡಾರವನ್ನು ನಮಗಾಗಿ ಕೊಟ್ಟಿದ್ದಾರೆ. ಅವುಗಳನ್ನು ಓದುವುದರ ಮೂಲಕ ಆದರ್ಶ ಬದುಕನ್ನು ರೂಪಿಸಿಕೊಳ್ಳಬೇಕು. ನಾವು ಬೆಳೆದು ಬಂದ ಸ್ಥಿತಿಗತಿ, ಪರಿಸರವನ್ನು ನಮ್ಮ ಬೆನ್ನಿಗೆ ಕಟ್ಟಿಕೊಂಡೇ ಬಂದಾಗ ನಾವು ಸಾಧಕರಾಗುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎಸ್ ಎಸ್ ತೇರದಾಳ ಅವರು, ನಮ್ಮ ನಾಡು ನುಡಿಯ ಬಗೆಗೆ ಗೌರವವಿರಬೇಕು. ನಾವು ಎಲ್ಲಿಯ ತನಕ ಕನ್ನಡವನ್ನು ಬಳಸುತ್ತೇವೆಯೋ ಅಲ್ಲಿಯ ತನಕ ಕನ್ನಡಕ್ಕೆ ಅಳಿವೆನ್ನುವುದೇ ಇಲ್ಲ. ಒಂದು ಭಾಷೆಯಜೊತೆಗೆ ಒಂದು ಸಂಸ್ಕೃತಿಯೂ ಜೀವಂತವಾಗಿರುತ್ತದೆ. ವೃತ್ತಿಗಾಗಿ
ಯಾವುದೇ ಭಾಷೆಯನ್ನು ಬಳಸಲಿ ಅದರಾಚೆಗೆ ಕನ್ನಡ ನಮ್ಮ ಉಸಿರಾಗಿರಲಿ. ನಮ್ಮ ಮಹಾವಿದ್ಯಾಲಯದಲ್ಲಿ ಕನ್ನಡದ ಕುರಿತು ಇಂತಹ ಒಂದು ಭವ್ಯ ಕಾರ್ಯಕ್ರಮ ಮೊದಲ ಬಾರಿಗೆ ಜರುಗುತ್ತಿದೆ. ಅದು ವಿರ್ದ್ಯಾರ್ಥಿಗಳೇ ಸ್ವ ಇಚ್ಚೆಯಿಂದ ಈ ಕಾರ್ಯಕ್ರಮ ಮಾಡಿರುವುದರಿಂದ ಅವರಲ್ಲಿರುವ ಕನ್ನಡ ಪ್ರೇಮ ಇನ್ನಷ್ಟು ಜಾಗೃತವಾಗಿದೆ. ಗಡಿ ಭಾಗದಲ್ಲಿ ಇಂತಹ ಕನ್ನಡದ ಕಾರ್ಯಕ್ರಮದ ಅವಶ್ಯಕತೆಯಿದೆ. ಇದರಿಂದಾಗಿ ಕನ್ನಡ ಪರಿಸರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದರು.
ಕನ್ನಡಾಂಬೆ ಮತ್ತು ಸಂಗೊಳ್ಳಿ ರಾಯಣ್ಣನ ಭವ್ಯ
ಮೂರ್ತಿಗಳನ್ನು ಒಳಗೊಂಡ ರೂಪಕ ವಾಹನವನ್ನು ಮಾಳಮಾರುತಿ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಜೆ.ಎಂ. ಕಾಲಿಮಿರ್ಚಿ ಅವರು ಕನ್ನಡಾಂಬೆಗೆ ಮತ್ತು ಸಂಗೊಳ್ಳಿ ರಾಯಣ್ಣನಿಗೆ ಪೂಜೆ ಸಲ್ಲಿಸಿ ಕನ್ನಡ ಧ್ವಜವನ್ನು ತೋರಿಸುವುದರ ಮೂಲಕ
ಭವ್ಯವಾದ ಕುಂಬ ಮೇಳದ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ಮುನ್ನೂರು ವಿದ್ಯಾರ್ಥಿನಿಯರು ಕುಂಭವನ್ನು ಹೊತ್ತುಕೊಂಡು ಸಾಗಿದರು. ಮೆರವಣಿಗೆಯಲ್ಲಿ ಜಾನಪದ ನೃತ್ಯ, ಡೊಳ್ಳು ಕುಣಿತಗಳನ್ನು ಪ್ರದರ್ಶಿಸಿದರು. ಎತ್ತಿನ ಬಂಡಿಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದಿತು. ವಿದ್ಯಾರ್ಥಿಗಳು ಕನ್ನಡ ಪರ ಘೋಷಣೆಗಳನ್ನು ಕೂಗುತ್ತ ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ನಮ್ಮ ಹೃದಯದ ಒಂದು ಭಾಗ ಎಂದು ಕನ್ನಡದ ಪರ ಜೈ ಘೋಷಣೆ ಕೂಗಿದರು. ಕನ್ನಡ ಕವಿಪುಂಗವರನ್ನು, ಕನ್ನಡ ಹೋರಾಟಗಾರರ,
ಚರಿತ್ರೆ, ಪರಂಪರೆಗೆ ಸಂಬಂಧಿಸಿದ
ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಮೆರವಣಿಗೆ ಮಹಾವಿದ್ಯಾಲಯದಿಂದ ಮಾಳಮಾರುತಿ ಮಾರ್ಗವಾಗಿ ಸಾಗಿ ಶ್ರೀನಗರ ಗಾರ್ಡನ್ ವೃತ್ತವನ್ನು ಸುತ್ತುವರಿದು ಪುನಃ ಮಹಾವಿದ್ಯಾಲಯಕ್ಕೆ ಬಂದು ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗ ಭಾಗಿಯಾದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಾವುಕಾರ ಕಾಂಬ್ಳೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಡಾ. ನಾರಾಯಣ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿ ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಪ್ರೀತಿ ಬಡಿಗೇರ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿನಿಯರಾದ ಶಾಂಭವಿ ಥೋರ್ಲಿ ಹಾಗೂ ಭಾರತಿ ನಾಯಕ ನಿರೂಪಿಸಿದರು. ಡಾ. ವೈ. ಎ. ಜಕ್ಕಣವರ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಮಸ್ತ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.