ಬೆಳಗಾವಿ : ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ಅವರು ಶನಿವಾರ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಿ ಹಿಂದು ಪತ್ರಿಕೆಯಲ್ಲಿ ಸುಮಾರು 47 ವರ್ಷ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿ ಬಳಿಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ಕೆಲ ವರ್ಷಗಳಿಂದ ಶಾಸ್ತ್ರ ಅಧ್ಯಯನ ಮಾಡುತ್ತಿದ್ದರ ಜಪ ತಪ ಮತ್ತು ಅನುಷ್ಠಾನ ನಿರತರಾಗಿದ್ದರು.
ಮೂಲತಃ ಬಳ್ಳಾರಿಯ ಮದನ ಮೋಹನ ಅವರು, 1958ರಲ್ಲಿ ಹುಬ್ಬಳ್ಳಿಗೆ ಬಂದರು. ಬೆಳಗಾವಿ, ಗೋವಾ ಕೆಲಸ ಮಾಡಿದ ನಂತರ 1968ರಲ್ಲಿ ಮತ್ತೆ ಹುಬ್ಬಳ್ಳಿಗೆ ಬಂದು, ಉತ್ತರ ಕರ್ನಾಟದ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡಿದರು. 2005ರಲ್ಲಿ ನಿವೃತ್ತರಾದರು.
ಇಂಗ್ಲಿಷ್ ಭಾಷಾ ಪತ್ರಕರ್ತರಾದರೂ ಕನ್ನಡದಲ್ಲೂ ಬರೆಯುತ್ತಿದುದು ಅವರ ವಿಶೇಷತೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಅಧಿಕಾರ ವೀಕೇಂದ್ರಿಕರಣ, ಜಲಸಂಪನ್ಮೂಲ, ಪ್ರಾದೇಶಿಕ ಅಸಮಾನತೆಯ ನಿವಾರಣೆ ಅವರ ಆಯ್ಕೆಯ ವಿಷಯಗಳಾಗಿದ್ದವು. ವಸ್ತುನಿಷ್ಠ ವರದಿಗಾರಿಕೆಗೆ ಹೆಸರಾಗಿದ್ದರು. ನೀರಾವರಿ ಯೋಜನೆಗಳು, ಕೃಷ್ಣಾ ಜಲ ವಿವಾದದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು.
ಅವರ ತಂದೆ ರಾಘವೇಂದ್ರರಾವ್ ದಿ ಹಿಂದು ಪತ್ರಿಕೆಯ ಬಳ್ಳಾರಿ ವರದಿಗಾರರಾಗಿದ್ದರು. ಮದನ ಮೋಹನ ಅವರ ಪುತ್ರ ಮತ್ತಿಹಳ್ಳಿ ರಾಘವ ಕೂಡ ದಿ ಹಿಂದು ಪತ್ರಿಕೆಯ ಪತ್ರಕರ್ತರು.