ಮುಂಬೈ :
ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕ ಪ್ರದೇಶಗಳನ್ನು ಒಳಗೊಂಡ ಅಖಂಡ ಮಹಾರಾಷ್ಟ್ರ ರಚನೆ ಶೀಘ್ರವೇ ಆಗಬೇಕು ಎಂದು ಒತ್ತಾಯಿಸಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮತ್ತು ಉದ್ದವ ಠಾಕ್ರೆ ನೇತೃತ್ವದ ಶಿವಸೇನೆ (ಮಹಾ ವಿಕಾಸ ಅಘಾಡಿ ಮೈತ್ರಿಕೂಟ) ಮುಂಬೈಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಉದ್ದವ ಠಾಕ್ರೆ, ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಕರ್ನಾಟಕದ ಅನೇಕ ಗ್ರಾಮಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸುವ ಮೂಲಕ ಸಂಯುಕ್ತ ಮಹಾರಾಷ್ಟ್ರ ಕನಸು ನನಸಾಗಿಸಬೇಕು ಎಂದು ಕರೆ ನೀಡಿದರು. ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ನೇತ್ರತ್ವದ ಶಿವಸೇನೆ ಹಾಗೂ ಬಿಜೆಪಿ ಸರಕಾರ ಗಡಿಭಾಗದ ಮರಾಠಿ ಜನರ ಅಸ್ಮಿತೆಯನ್ನು ಮರೆತಿದೆ ಎಂದು ಮೂರೂ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಜೊತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ನಡೆಸಿದ ಮಾತುಕತೆಯ ವಿವರವನ್ನು ಬಹಿರಂಗಪಡಿಸಬೇಕು ಎಂದು ಎನ್ ಸಿ ಬಿ ನಾಯಕ ಅಜಿತ್ ಪವಾರ್ ಒತ್ತಾಯಿಸಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಮರಾಠಿ ಮಾತನಾಡುವ ಹಲವು ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಸಂಯುಕ್ತ ಮಹಾರಾಷ್ಟ್ರದ ಕನಸು ಈಡೇರಬೇಕು. ಮಹಾರಾಷ್ಟ್ರದ ಹಳ್ಳಿಗಳು ಈ ಮೊದಲು ರಾಜ್ಯದಿಂದ ಹೊರ ಹೋಗುವ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ ಇದೀಗ ಏಕೆ ಹೀಗಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ಮಹಾರಾಷ್ಟ್ರ ಒಗ್ಗಟ್ಟಿನಿಂದ ಇರಬೇಕಾದ ಅಗತ್ಯವಿದೆ. ಮಹಾವಿಕಾಸ ಅಘಾಡಿ ರಾಜ್ಯದ ಸಮಗ್ರತೆಯನ್ನು ರಕ್ಷಿಸುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಇಂದಿನ ಪ್ರತಿಭಟನೆ ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಮಹಾರಾಷ್ಟ್ರವನ್ನು ನಿರಂತರವಾಗಿ ಕೆಣಕುತ್ತಿದೆ. ಸರಕಾರಿ ನೌಕರರ ವೇತನವನ್ನು ಕರ್ನಾಟಕ ಬ್ಯಾಂಕ್ ಮೂಲಕ ಪಾವತಿಸುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು.