ಅಥಣಿ :
ಜಾರ್ಖಂಡ್ ರಾಜ್ಯದ ಜೈನರ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸ ತಾಣವನ್ನಾಗಿ ಅಧಿಸೂಚನೆ ಹೊರಡಿಸಿದ ಜಾರ್ಖಂಡ್ ಸರಕಾರದ ನಡೆ ಖಂಡಿಸಿ ಅಥಣಿಯಲ್ಲಿ ಇಂದು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಅಥಣಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ನಗರದ ಮಹಾವೀರ ವೃತ್ತದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ನಂತರ ಬಸವೇಶ್ವರ ಸರ್ಕಲ್, ಮುರುಘೇಂದ್ರ ಸರ್ಕಲ್ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೊಲ್ಹಾಪುರದ ಸ್ವಸ್ತಿಶ್ರೀ ಲಕ್ಷ್ಮಿಸೇನ್ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿಯವರು ಮಾತನಾಡಿ ಶಿಖರಜಿಯನ್ನು ಪ್ರವಾಸಿ ತಾಣವಾಗಿ ಮಾಡುವುದರಿಂದ ಅದರ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿ ಬಾರ್, ರೆಸ್ಟೋರೆಂಟ್ ಗಳು ಸ್ಥಾಪನೆಯಾಗುವ ಕಾಲ ಬರುವುದು ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಣಯ ವಾಪಸ್ಸು ಪಡೆದು ಜೈನರ ಧಾರ್ಮಿಕತೆ ರಕ್ಷಿಸಬೇಕು ಎಂದರು. ಜೈನ ಧರ್ಮದ ತತ್ವವು ಬದುಕು ಬದುಕಲು ಬಿಡಿ ಆಗಿದ್ದು ನಾವು ಯಾರ ವಿರುದ್ಧವಿಲ್ಲದೇ ಶಾಂತಿ ಪ್ರಿಯರು ನಮ್ಮ ಧರ್ಮದ ಧಕ್ಕೆ ಬಂದರೆ ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ, ಜಾರ್ಖಂಡ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಪ್ರತಿಭಟನಾ ರ್ಯಾಲಿಯಲ್ಲಿ ಕೆಎ ವನಜೋಳ, ವಿದ್ಯಾಧರ ಡುಮ್ಮನ್ನವರ, ರಮೇಶ್ ಬಾಳೆಕಾಯಿ, ಬಾಹುಬಲಿ ಕಡೋಲಿ, ಅರುಣ ಯಲಗುದ್ರಿ, ಗುಂಡು ಇಜಾರೆ, ನಿತೀನ್ ಘೋಂಗಡಿ, ಆರ್ ಪಿ ಹಗೇದ್, ಲೆನಿನ್ ಹಳಿಂಗಲಿ, ರಾಘವೇಂದ್ರ ಹಳಿಂಗಲಿ, ಪ್ರಪುಲ್ ಪಡನಾಡ, ಅಮರ ದುಗ೯ಣ್ಣವರ, ಪುಷ್ಪಕ್ ಪಾಟೀಲ, ಶಾಂತು ನಂದೇಶ್ವರ್ , ಮುತ್ತಣ್ಣ ಕಾತ್ರಾಳ, ರಾಜು ನಾಡಗೌಡ, ಅಶೋಕ ಪಡನಾಡ, ಲಕ್ಷ್ಮಣ ಬಣಜವಾಡ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ಮಹಿಳಾ ಮಂಡಳಿಯ ಸದಸ್ಯರು, ಸೇವಾದಳದ ಕಾರ್ಯಕರ್ತರು, ಸಾವಿರಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.