ಬೆಳಗಾವಿ :
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಫೆ. 1ರಂದು ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡದ ಅಡಿಗಲ್ಲು ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ ತಿಳಿಸಿದರು.
ಬುಧವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎಲ್ಲ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು. ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅಧ್ಯಕ್ಷತೆ ವಹಿಸುವರು. ರಾಜ್ಯ ಸರಕಾರದ ಹಲವು ಸಚಿವರು, ಶಾಸಕರು ಸೇರಿ ಲಕ್ಷಾಂತರ ಸಮಾಜ ಬಾಂಧವರು ಸೇರಲಿದ್ದಾರೆ ಎಂದರು.
ನಮ್ಮ ಸಮಾಜ ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ಮೀಸಲಾತಿ ವಿಚಾರದಲ್ಲಿಯೂ ಸಾಕಷ್ಟು ಗೊಂದಲವಿದ್ದು, ಒಂದಿಷ್ಟು ಜನರಿಗೆ 2ಎ ಕೊಟ್ಟರೆ, ಮತ್ತೊಂದಿಷ್ಟು ಜನರಿಗೆ 3ಬಿ ಪಟ್ಟಿಯಲ್ಲಿ ಸೌಲಭ್ಯ ನೀಡುತ್ತಿದ್ದಾರೆ. ಈ ಗೊಂದಲ ಬಗೆಹರಿಸಿ ಹಡಪದ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರಿಸಬೇಕು ಎಂದು ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೇಡಿಕೆ ಇಡುತ್ತೇವೆ ಎಂದು ಸಂತೋಷ ಹಡಪದ ಮಾಹಿತಿ ನೀಡಿದರು.
ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಹಡಪದ, ಜಿಲ್ಲಾಧ್ಯಕ್ಷ ಸುರೇಶ ಹಡಪದ, ತಾಲೂಕಾ ಅಧ್ಯಕ್ಷ ಮಹಾಂತೇಶ ಹಂಪನ್ನವರ, ಸಂಗಮೇಶ ಹಡಪದ, ರಾಜು ನಾವಿ, ವಿಜಯ ಹಡಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.