ಬೆಳಗಾವಿ: ವಿವಾಹಿತೆಯ ಸಾವಿನ ನಂತರ ಪೋಷಕರು ಆಕೆಯ ಸಾವಿನ ಬಗ್ಗೆ ಅಳಲು ತೋಡಿಕೊಂಡಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮಕ್ಕೆ ವಿವಾಹವಾದ ಮಹಿಳೆಯ ಆತ್ಮಹತ್ಯೆ ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಸವಿತಾ ಮಾರುತಿ ಜೋಗನಿ (ವಯಸ್ಸು 32,ವ.ಸಾಂಬ್ರಾ) ಮೃತ ವಿವಾಹಿತೆ. ಸವಿತಾ ಅವರಿಗೆ ಆರೂವರೆ ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿದೆ. ನಾಲ್ಕು ವರ್ಷದ ಮಗನಿದ್ದಾನೆ. ಶನಿವಾರ ಮಧ್ಯಾಹ್ನ ತನ್ನ ನಿವಾಸದಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಂಧಿಕರು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ವಿವಾಹಿತ ಮಹಿಳೆಯ ತಾಯಿ ರಕ್ಕಸಕೊಪ್ಪ ಗ್ರಾಮದ ಭಾರತಿ ಗವಡು ಮೋರೆ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನು ಕೊಲ್ಲಲಾಗಿದೆ ಎಂದು ಶಂಕಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ಹೇಳಲಾಗಿದೆ. ಆದರೆ, ಮೃತ ಮಹಿಳೆಯ ಕುಟುಂಬಸ್ಥರು ಕೊಂದಿರುವ ಬಗ್ಗೆ ಪತಿಯ ಮನೆಯವರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. 2018 ರಲ್ಲಿ ಸಾಂಬ್ರಾದ ಮಾರುತಿ ಜೋಗಾನಿಗೆ ತಮ್ಮ ಮಗಳನ್ನು ಮದುವೆ ಮಾಡಿ ಕೊಡಲಾಗಿದೆ. ನಮ್ಮ ಮಗಳನ್ನು ಸಾಂಬ್ರಾ ಗ್ರಾಮದ ತಮ್ಮ ಮನೆಯ ಮೇಲಿನ ಮಹಡಿಯ ಬೆಡ್ ರೂಮಿನ ಹುಕ್ಕಿಗೆ ವೇಲ್ ಮೂಲಕ ಕುತ್ತಿಗೆಗೆ ಕಟ್ಟಿ ಉರುಳು ಹಾಕಿಕೊಂಡು ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ ಎಂದು ಮೃತ ಮಹಿಳೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.