ಬೆಳಗಾವಿ :
ಬೆಳಗಾವಿ ಮರಾಠಿ ಭಾಷಿಕರ ಸ್ವಾಭಿಮಾನದ ಸಂಕೇತ ಎಂದು ಗುರುತಿಸಿಕೊಂಡಿರುವ
ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಇದೀಗ ಚುನಾವಣೆಯ ಹೊತ್ತಿನಲ್ಲಿ ದ್ವಿಮುಖ ನೀತಿ ಅನುಸರಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಬಗ್ಗೆ ಸಾಪ್ಟ್ ಹಾಗೂ ಬಿಜೆಪಿಯನ್ನು ತೀವ್ರವಾಗಿ ವಿರೋಧಿಸಲು ಮುಂದಾಗಿರುವುದು
ಇದಕ್ಕೆ ಸ್ವತಃ ಮರಾಠಿ ಭಾಷಿಕರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಇದೀಗ ಕಾವೇರಿದೆ. ಇಂಥ ಸಂದರ್ಭದಲ್ಲಿ ಇದೀಗ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಸುದ್ದಿ ಆಗುತ್ತಿದೆ. ಕಾಂಗ್ರೆಸ್ ಪರವಾಗಿ ಮೃದು ನೀತಿ ಅನುಸರಿಸುತ್ತಿದ್ದರೆ, ಬಿಜೆಪಿ ವಿರುದ್ಧ ಕಠಿಣ ನೀತಿ ಅನುಸರಿಸುತ್ತಿರುವುದು ಯಾಕೆ ಎನ್ನುವುದು ಬೆಳಗಾವಿ ಮರಾಠಿಗರ ಬಲವಾದ ಪ್ರಶ್ನೆಯಾಗಿದೆ. ಕಾಂಗ್ರೆಸ್ ನೊಂದಿಗೆ ಎಂಇಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಪ್ರಶ್ನೆ ಮರಾಠಿಗರನ್ನು ಕಾಡುತ್ತಿದೆ.
ಬೆಳಗಾವಿಯಲ್ಲಿ ಸದ್ಯ ಮರಾಠಿ ಭಾಷಿಕರ ಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಹಿಂದೊಂದು ಕಾಲದಲ್ಲಿ ಮರಾಠಿ ಭಾಷಿಕರು ಎಂದರೆ ಅರ್ಥಾತ್ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಎಂದೇ ಪರಿಗಣಿತವಾಗುತ್ತಿತ್ತು. ಆದರೆ ಇದೀಗ ಕಾಲಮಾನಕ್ಕೆ ತಕ್ಕಂತೆ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಮರಾಠಿ ಭಾಷಿಕರು ಸಂಪೂರ್ಣವಾಗಿ ಬಿಜೆಪಿ ಕಡೆ ವಾಲಿದ್ದಾರೆ. ಈ ಬೆಳವಣಿಗೆಯಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ತಂದಿರುವ ಬಿಜೆಪಿಯನ್ನೇ ತೀವ್ರವಾಗಿ ವಿರೋಧ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಇಲ್ಲೂ ತನ್ನ ಸ್ವಾಭಿಮಾನ ಬಲಿ ಕೊಟ್ಟಿರುವುದು ಎದ್ದು ಕಂಡಿದೆ. ಕಾಂಗ್ರೆಸ್ ಪಕ್ಷದ ಜೊತೆ ಎಂಇಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಗುಮಾನಿ ನಡೆದಿದೆ.
ಬೆಳಗಾವಿಯ ಹಿಂಡಲಗಾದಲ್ಲಿ ಮಂಗಳವಾರ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳಕರ ಪರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದಾರೆ. ಮತ್ತೆ ಇದೀಗ ಮತ್ತೊಬ್ಬ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ಮೇ 4ರಂದು ಬೆಳಗಾವಿಗೆ ಆಗಮಿಸಿ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಗ್ರಾಮೀಣದ ಬೆನಕನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಅವರ ಪ್ರಚಾರಕ್ಕೂ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಯಾವುದೇ ರೀತಿಯ ಆಕ್ಷೇಪವಿಲ್ಲ.
ಆದರೆ ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಹಾಗೂ ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಳಗಾವಿಯ ಟಿಳಕ ಚೌಕದಲ್ಲಿ ಬೆಳಗ್ಗೆ 10 ಗಂಟೆಗೆ ಹಾಗೂ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ನಡೆಸಿಕೊಡಲಿರುವ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸುವುದಾಗಿ ಎಂಇಎಸ್ ಹೇಳಿರುವುದು ಇದೀಗ ತೀವ್ರ ಗೊಂದಲಕ್ಕೆ ಕಾರಣವಾಗಿದೆ. ದೇವೇಂದ್ರ ಫಡ್ನವಿಸ್ ಬೆಳಗಾವಿಗೆ ಬರಲಿ. ಅವರಿಗೆ ಕಪ್ಪು ಬಾವುಟ ಹಾರಿಸಿ ಪ್ರದರ್ಶನ ಮಾಡಲಿರುವುದಾಗಿ ಎಂಇಎಸ್ ಎಚ್ಚರಿಕೆ ನೀಡಿದೆ.
ವಿರೋಧ ವ್ಯಕ್ತಪಡಿಸುವುದಾದರೆ ಬಿಜೆಪಿ ಹಾಗೂ ಕಾಂಗ್ರೆಸ್ ಇಬ್ಬರಿಗೂ ಅನ್ವಯವಾಗಬೇಕು. ಆದರೆ ಕಾಂಗ್ರೆಸ್ ಬಗ್ಗೆ ಒಂದು ನೀತಿ ಅನುಸರಿಸುವ ಎಂಇಎಸ್ ಬಿಜೆಪಿ ವಿರುದ್ಧ ಸಿಡಿದೇಳಲು ಕಾರಣ ಏನು ಎನ್ನುವುದು ಸ್ವಾಭಿಮಾನಿ ಮರಾಠಿಗರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಆದರೆ ಮಹಾರಾಷ್ಟ್ರ ಏಕೀಕರಣ ಸಮಿತಿ ಇಂಥ ಚಟುವಟಿಕೆ ನಡೆಸಲು ಮುಂದಾದರೆ ಈ ಬಾರಿ ತಕ್ಕ ಪಾಠ ಕಲಿಸುವುದಾಗಿ ಬಿಜೆಪಿಯಲ್ಲಿರುವ ಸ್ವಾಭಿಮಾನಿ ಮರಾಠಿಗರು ಎಚ್ಚರಿಕೆ ರವಾನಿಸಿದ್ದಾರೆ. ಇದು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.