ಬೆಳಗಾವಿ :ಹಾಲಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ಮುಂದಿನ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿಗೆ ಉಜ್ವಲ ಅವಕಾಶವಿದೆ. ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಬಿಜೆಪಿಯಿಂದ ಮತ್ತೊಂದು ಸಲ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತು ಕೇಳಿ ಬಂದಿದೆ. ಜೊತೆಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ.
ಜೊತೆಗೆ ವಿಧಾನಸಭಾ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ. ಇವೆಲ್ಲ ಅಂಶಗಳು ಲೋಕಸಭಾ ಚುನಾವಣೆಗೆ ಪೂರಕವಾಗಲಿದೆ ಎಂಬ ಹಿನ್ನೆಲೆಯಲ್ಲಿ ಹಲವು ಲೆಕ್ಕಾಚಾರ ನಡೆಸಿರುವ ಕಾಂಗ್ರೆಸ್ ಹಿರಿಯ ರಾಜಕೀಯ ನಾಯಕ ಸತೀಶ ಜಾರಕಿಹೊಳಿ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಬಹುದು.
ಸಚಿವರಿಗೆ ಟಾಸ್ಕ್ :
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಕರ್ನಾಟಕದಿಂದ ಗೆಲ್ಲಿಸಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದು, ಹಲವು ಸಚಿವರಿಗೆ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಫರ್ಮಾನು ಹೊರಡಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಿಂದ ಕಳೆದ ಬಾರಿ ಲೋಕಸಭೆಗೆ ಸ್ಪರ್ಧೆ ನಡೆಸಿ ಕೆಲವೇ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಸತೀಶ ಜಾರಕಿಹೊಳಿ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಸೂಚಿಸಲಾಗಿದೆ ಎಂಬ ಮಾಹಿತಿ ಇದೆ.
2014 ರಲ್ಲಿ ಕಾಂಗ್ರೆಸ್ ಪಕ್ಷ ಚಿಕ್ಕೋಡಿಯಲ್ಲಿ ಪ್ರಕಾಶ ಹುಕ್ಕೇರಿ ಅವರ ಅವರಿಗೆ ಮನಸ್ಸಿಲ್ಲದಿದ್ದರೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ಚಿಕ್ಕೋಡಿಯಿಂದ ಕಣಕ್ಕೆ ಇಳಿಸಿ ಯಶಸ್ಸು ಸಾಧಿಸಿತ್ತು. ಆಗ ಪ್ರಕಾಶ ಹುಕ್ಕೇರಿ ಜಯಭೇರಿ ಗಳಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಕರ್ನಾಟಕದಿಂದ ಲೋಕಸಭೆಗೆ 18 ರಿಂದ 20 ಸೀಟು ಗೆಲುವು ಲೆಕ್ಕಾಚಾರದಲ್ಲಿದೆ. ಆರಂಭದಿಂದಲೂ ರಾಷ್ಟ ರಾಜಕಾರಣದಲ್ಲಿ ಅತ್ಯಾಸಕ್ತಿ ಹೊಂದಿರುವ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ದಶಕಗಳಿಂದ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಕೇಂದ್ರ ಸಚಿವರು ಆಗಿದ್ದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಮಹದೇವಪ್ಪ ಸ್ಪರ್ಧಿಸಬಹುದು.
ಬೆಳಗಾವಿಯಿಂದ ಸತೀಶ ಜಾರಕಿಹೊಳಿ, ಚಾಮರಾಜನಗರದಿಂದ ಮಹಾದೇವಪ್ಪ, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ, ಕೋಲಾರದಿಂದ ಮುನಿಯಪ್ಪ ಸ್ಪರ್ಧಿಸುವ ಸಾಧ್ಯತೆ ಇದೆ.
ಚಿಕ್ಕೋಡಿಯಿದ ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವರು ಆಗಿರುವ ಪ್ರಕಾಶ ಹುಕ್ಕೇರಿ ಅವರನ್ನೇ ಮತ್ತೊಂದು ಸಲ ಸ್ಪರ್ಧೆಗೆ ಸೂಚಿಸುವ ಸಾಧ್ಯತೆ ಹೆಚ್ಚಾಗಿದೆ.