ಬೆಳಗಾವಿ:
ಇಲ್ಲಿಯ ಸಾರ್ವಜನಿಕ ವಾಚನಾಲಯ ಪ್ರತಿವರ್ಷ ನೀಡುವ ಪತ್ರಕರ್ತ ಪ್ರಶಸ್ತಿ
ಕನ್ನಡ ವಿಭಾಗದಲ್ಲಿ
ಎಂ.ಎನ್. ಪಾಟೀಲ (ಮುಖ್ಯ ವರದಿಗಾರರು, ಲೋಕದರ್ಶನ ದಿನಪತ್ರಿಕೆ, ಬೆಳಗಾವಿ),
ಮರಾಠಿ ವಿಭಾಗದಲ್ಲಿ ಅಣ್ಣಪ್ಪ ಪಾಟೀಲ (ಪತ್ರಕರ್ತ, ತರುಣ ಭಾರತ ದಿನ ಪತ್ರಿಕೆ, ಬೆಳಗಾವಿ)
ಹಾಗೂ ಎಸ್.ಆರ್.ಜೋಗ ಮಹಿಳಾ ಪತ್ರಕರ್ತೆ ಪ್ರಶಸ್ತಿ ಕನ್ನಡ ವಿಭಾಗದಲ್ಲಿ ಮಂಜುಳಾ ಪಾಟೀಲ, (ಸಂಪಾದಕಿ, ಸಂಧ್ಯಾ ಸಮಯ ದಿನ ಪತ್ರಿಕೆ, ಬೆಳಗಾವಿ) ಹಾಗೂ
ಮರಾಠಿ ವಿಭಾಗದಲ್ಲಿ ಕ್ರಾಂತಿ ಹುದ್ದಾರ (ಸಂಪಾದಕಿ, ಬೆಳಗಾವ ವಾರ್ತಾ ದಿನ ಪತ್ರಿಕೆ) ಇವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ಪ್ರಶಸ್ತಿಯನ್ನು ಖಾನಾಪುರ ರಸ್ತೆಯ ಮರಾಠಾ ಮಂದಿರ ಸಭಾಗೃಹದಲ್ಲಿ ಬ್ಯಾರಿಸ್ಟರ್ ನಾಥ ಪೈ ವ್ಯಾಖ್ಯಾನಮಾಲೆ ಸಮಾರಂಭದಲ್ಲಿ ಬುಧವಾರ ಸಾಧಕರು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಂಜುಳಾ ಪಾಟೀಲ, ಬೆಳಗಾವಿಯ ಪ್ರತಿಷ್ಠಿತ ಸಾರ್ವಜನಿಕ ವಾಚನಾಲಯ ನನಗೆ ನೀಡಿರುವ ಎಸ್. ಆರ್. ಜೋಗ್ ಪ್ರಶಸ್ತಿಯಿಂದ ಪುಳಕಿತಳಾಗಿದ್ದೇನೆ. ಇಷ್ಟಕ್ಕೆಲ್ಲ ಕಾರಣ ನನ್ನ ಪತ್ರಿಕೋದ್ಯಮ ಗುರುಗಳಾಗಿದ್ದ ನಾಡೋಜ ಪತ್ರಿಕೆಯ ಸಂಪಾದಕರಾಗಿದ್ದ ದಿ. ರಾಘವೇಂದ್ರ ಜೋಶಿ ಅವರು. ಬೆಳಗಾವಿಯಲ್ಲಿ ಕನ್ನಡ-ಮರಾಠಿ
ಭಾಷಾ ಭೇದವಿಲ್ಲದೆ ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಅಭಿನಂದನೀಯ.
ಇಂತಹ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಮಾತ್ರವಲ್ಲ ಸೌಭಾಗ್ಯವೂ ಹೌದು. ಎಲೆ ಮರೆಯ ಕಾಯಿಯಂತೆ ಇದ್ದ ನನ್ನನ್ನು ಹುಡುಕಿಕೊಂಡು ಬಂದು ಪ್ರಶಸ್ತಿ ನೀಡಿರುವ ಸಾರ್ವಜನಿಕ ವಾಚನಾಲಯದವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.
ಉಪನ್ಯಾಸ ನೀಡಿದ ಗಣೇಶ ಶಿಂಧೆ ಅವರು,
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಸಂಖ್ಯೆ ಹೆಚ್ಚಿದ್ದರೂ ಜನರ ನಡುವೆ ಸಂಪರ್ಕ ಸ್ಥಗಿತಗೊಂಡಿದೆ. ಕೇವಲ ಹಣದಿಂದ ಸಂತೋಷ ಸಾಧಿಸಲು ಸಾಧ್ಯವಿಲ್ಲ. ಪರಸ್ಪರ ಸಂವಹನ ನಡೆಸಿ ಸಂಬಂಧಗಳನ್ನು ಉಳಿಸಿ ಸುಂದರ ಬದುಕಿಗೆ ದಾರಿ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಪ್ರಾಣಿಗಳಿಗೆ ಭಾವನೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿಯನ್ನು ದೇವರು ಮನುಷ್ಯನಿಗೆ ಮಾತ್ರ ನೀಡಿದ್ದಾನೆ. ನಾವೆಲ್ಲರೂ ಪರಸ್ಪರ ಭಿನ್ನರು. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು, ಯಾರೋ ಒಬ್ಬ ಒಳ್ಳೆಯ ಭಾಷಣಕಾರ, ಪತ್ರಕರ್ತ, ಬರಹಗಾರ, ಸಂಗೀತಗಾರ ಇರುತ್ತಾರೆ. ಅವರು ತಮ್ಮಲ್ಲಿರುವ ಕಲೆಯನ್ನು ಸದುಪಯೋಗಪಡಿಸಿಕೊಂಡು ಇತರರಿಗೆ ಉಪಯುಕ್ತವಾದ ಸಹಾಯ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಸಾರ್ವಜನಿಕ ವಾಚನಾಲಯದ ಅಧ್ಯಕ್ಷ ಗೋವಿಂದ ರಾವತ್, ಅನಂತ ಲಾಡ್, ಅಪ್ಪಾ ಸಾಹೇಬ ಗುರವ, ಸುನೀತಾ ಮೋಹಿತೆ, ವಿನೋದ ಗಾಯಕ್ವಾಡ್ ಉಪಸ್ಥಿತರಿದ್ದರು.