ಬೆಂಗಳೂರು:
‘ಡಿ.ಕೆ. ಶಿವಕುಮಾರ್ ಅವರು ಪಕ್ಷದ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುತ್ತಾರೆ. ತಾವು ಹಿಡಿದ ಕೆಲಸವನ್ನು ಮಾಡಿಯೇ ತೀರುವ ಗುಣ ಅವರದ್ದು. ಪಕ್ಷದ ಎಲ್ಲ ನಾಯಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರ ಕಾರ್ಯವೈಖರಿಯನ್ನು ಗುಣಗಾನ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಹಾಗೂ ಭಾರತ ಜೋಡೋ ಸಭಾಂಗಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;
‘ಇದು ವಿಶೇಷ ಹಾಗೂ ಚಿಕ್ಕ ಕಾರ್ಯಕ್ರಮವಾದರೂ ಇಂದಿರಾ ಗಾಂಧಿ ಅವರ ಹೆಸರಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಿರುವುದು ದೊಡ್ಡ ವಿಚಾರ. ದೆಹಲಿ ಕಾಂಗ್ರೆಸ್ ಕಚೇರಿ ಬಿಟ್ಟರೆ ನಂತರದ ದೊಡ್ಡ ಕಾಂಗ್ರೆಸ್ ಕಚೇರಿ ಇರುವುದು ಬೆಂಗಳೂರಿನಲ್ಲಿ. ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಭವ್ಯವಾಗಿ ಈ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅವರು ಯಾವ ಕೆಲಸವನ್ನು ಹಿಡಿಯುತ್ತಾರೋ ಆ ಕೆಲಸವನ್ನು ಅವರು ಮಾಡಿಯೇ ತೀರುತ್ತಾರೆ. ಕೆಲವೊಮ್ಮೆ ಸಿಟ್ಟು ಮಾಡಿಕೊಂಡರೂ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಅವರ ಈ ಗುಣವನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಮೆಚ್ಚಿದ್ದಾರೆ.
ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವಾಗ ನಾನು ತಲೆ ಕೆರೆದುಕೊಳ್ಳುತ್ತಿದ್ದೆ. ಆಗ ಸೋನಿಯಾ ಗಾಂಧಿ ಅವರು ಯಾಕೆ ಎಂದು ಕೇಳಿದರು. ನಾನು ಆಗ ಈ ಆಯ್ಕೆ ಬಗ್ಗೆ ಅನುಮಾನವಿದೆ ಎಂದು ಹೇಳಿದೆ. ಆದರೆ ಸೋನಿಯಾ ಗಾಂಧಿ ಅವರು ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು. ಆದರೆ ಅಧ್ಯಕ್ಷರಾದ ನಂತರ ಡಿ.ಕೆ. ಶಿವಕುಮಾರ್ ಅವರು ತಾವು ಎಲ್ಲರೂನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿ, ಎಲ್ಲರ ಜತೆ ಸಾಗುವುದಾಗಿ ಸಾಬೀತು ಮಾಡಿ ತೋರಿಸಿದ್ದಾರೆ. ಎಲ್ಲ ನಾಯಕರ ಜತೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಅವರು ಇದೇ ಕೆಲಸವನ್ನು ಮುಂದುವರಿಸಲಿ.
ಈ ಕಟ್ಟಡಕ್ಕೆ ಯಾವ ಹೆಸರು ಇಡಬೇಕು ಎಂದು ಶಿವಕುಮಾರ್ ಅವರು ನನಗೆ ಕೇಳಿದಾಗ, ಇಂದಿರಾ ಗಾಂಧಿ ಅವರ ಹೆಸರಿಡುವಂತೆ ಸಲಹೆ ನೀಡಿದೆ. ಕಾರಣ, ನನ್ನ ಸಕ್ರಿಯ ರಾಜಕಾರಣ ಪ್ರಾರಂಭವಾಗಿದ್ದು ಇಂದಿರಾ ಗಾಂಧಿ ಅವರ ಕಾಲದಲ್ಲಿ. ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದು ಅವರ ಕಾಲದಲ್ಲೇ. ಈ ಒಂದು ಸ್ವಾರ್ಥದಿಂದ ನಾನು ಈ ಸಲಹೆ ನೀಡಿದೆ.
ನಾವು ಒಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷದ 4 ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಬೇಕು. ನಂತರ ನುಡಿದಂತೆ ನಡೆಯಬೇಕು. ನಾವು ಈಗಲೂ ಇಂದಿರಾ ಗಾಂಧಿ ಅವರನ್ನು ಯಾಕೆ ಸ್ಮರಿಸುತ್ತೇವೆ ಎಂದರೆ, ಅವರು ಭೂಸುಧಾರಣೆ ಕಾಯ್ದೆ, 10 ಅಂಶಗಳ ಕಾರ್ಯಕ್ರಮ ಜಾರಿ ಮಾಡಿ ಪಕ್ಷಕ್ಕೆ ಮರುಚೈತನ್ಯ ತುಂಬಿದರು. ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ಆಮೂಲಕ ಬಡವರಿಗೆ ನಿರಾಳತೆ ಕೊಟ್ಟರು. ಇದೇ ಕಾರಣಕ್ಕೆ ದೇಶದ ಜನ ಇಂದಿರಾ ಗಾಂಧಿ ಅವರ ಜತೆ ನಿಂತರು. ಮುಂದಿನ ದಿನಗಳಲ್ಲಿ ನಿಮ್ಮ ಸರ್ಕಾರ ಬಂದಾಗ ಇಂದಿರಾ ಅವರ ಹಾದಿಯಲ್ಲೇ ಸಾಗಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬರುತ್ತಿರುವ ಯುದ್ಧವನ್ನು ನಾವು ಗೆಲ್ಲಬೇಕು. ನಾವು ನಮ್ಮ ಗುರಿ ತಲುಪದಿದ್ದರೆ ಯಾವುದೇ ಪ್ರಯೋಜನವಿಲ್ಲ. ಮೋದಿ ಅವರು ಪ್ರಜಾಪ್ರಭುತ್ವ ಮುಗಿಸಲು ಮುಂದಾಗಿದ್ದಾರೆ. ಅವರು ಸರ್ವಾಧಿಕಾರಿಯಾಗಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅವರು ಸಂಸತ್ತಿನಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದಿರಲಿ, ಅವರ ಮಂತ್ರಿಗಳು ನಮ್ಮ ಪ್ರಶ್ನೆಗಳನ್ನು ಸಾವಧಾನವಾಗಿ ಕೇಳಿಸಿಕೊಳ್ಳುತ್ತಿಲ್ಲ.
ರಾಹುಲ್ ಗಾಂಧಿ ಅವರು ಅದಾನಿ ವಿಚಾರವಾಗಿ ಸರ್ಕಾರಕ್ಕೆ ಕೆಲವು ಪ್ರಶ್ನೆ ಕೇಳಿದ್ದಾರೆ. 2014ರಲ್ಲಿ ಈ ಉದ್ಯಮಿ ಆಸ್ತಿ 50 ಸಾವಿರ ಕೋಟಿ ಇತ್ತು. ನಂತರ 2020ರಲ್ಲಿ ಇದು 2 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಆಗ 2023ರಲ್ಲಿ ಇದು 12 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಎಂತಹ ಜಾದು? ಈ ಸಂಪತ್ತು ಹೇಗೆ ಬಂತು ಎಂದು ರಾಹುಲ್ ಗಾಂಧಿ ಅವರು ಕೇಳಿದರು. ಮೋದಿ ಅವರ ಜತೆ ಅದಾನಿ ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದರು? ಅಲ್ಲಿ ಅದಾನಿ ಅವರಿಗೆ ಎಷ್ಟು ಗುತ್ತಿಗೆ ಕೊಡಿಸಿದಿರಿ? ಜನಸಾಮಾನ್ಯರ ಪರಿಶ್ರಮದ ಬ್ಯಾಂಕುಗಳು ಹಾಗೂ ಎಲ್ ಐಸಿಯ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿರುವ ಹಣ ಎಷ್ಟು? ಅದಾನಿ ಅವರ ಬೋಗಸ್ ಕಂಪನಿಯ 20 ಸಾವಿರ ಕೋಟಿ ಹಣ ಯಾರದ್ದು ಎಂದು ಕೇಳಿದರು? ಇದೇ ಪ್ರಶ್ನೆಯನ್ನು ಕೇಳಿದರೆ ನಾವು ಸಿಕ್ಕಿ ಬೀಳುತ್ತೇವೆ ಎಂದು ಅವರನ್ನು ಅನರ್ಹ ಮಾಡಿ, ಅವರ ನಿವಾಸ ಕಸಿದಿದ್ದಾರೆ.
ಬಿಜೆಪಿ ಸಂಸದ ದಲಿತ ವೈದ್ಯನಿಗೆ ಹಲ್ಲೆ ಮಾಡಿದಾಗ ಪ್ರಕರಣ ದಾಖಲಾಯಿತು. ಸೆಷನ್ ಕೋರ್ಟ್ ನಲ್ಲಿ ಜಾಮೀನು ಸಿಗಲಿಲ್ಲ, ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೇಳಿ, 5 ಲಕ್ಷ ದಂಡ ವಿಧಿಸಿದರು. ಆಗ ಆತನಿಗೆ 29 ದಿನ ಸಮಯಾವಕಾಶ ನೀಡಿದರು. ಆದರೆ ರಾಹುಲ್ ಗಾಂಧಿ ಅವರಿಗೆ ತೀರ್ಪು ಬಂದ 24 ಗಂಟೆಗಳಲ್ಲಿ ಅನರ್ಹತೆ ಮಾಡಿದರು. ಆಮೂಲಕ ರಾಹುಲ್ ಗಾಂಧಿ ಅವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಇವರು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುತ್ತಾರಾ?
ರಾಹುಲ್ ಗಾಂಧಿ ಹಾಗೂ ನಾನು ಸಂಸತ್ತಿನಲ್ಲಿ ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಕಡತದಿಂದ ತೆಗೆದು ಹಾಕಿದ್ದಾರೆ. ರಾಹುಲ್ ಗಾಂಧಿ ಯಾವುದಕ್ಕೂ ಹೆದರುವ ಮನುಷ್ಯ ಅಲ್ಲ. ಮೋದಿ, ಶಾ ಅವರಂತಹ ನೂರು ಜನ ಬಂದರೂ ಹೆದರುವುದಿಲ್ಲ. ಹೀಗಾಗಿ ನಾವು ಅವರಿಗೆ ಶಕ್ತಿ ತುಂಬಬೇಕು. ಭಾರತ ಜೋಡೋ ಯಾತ್ರೆ ಯಶಸ್ವಿ ಮಾಡಿದಂತೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಇದಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆಗ ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ.
ಈ ಕಟ್ಟಡ ಕಟ್ಟಿರುವ ಶಿವಕುಮಾರ್ ಹಾಗೂ ಇದಕ್ಕೆ ಸಹಕಾರ ನೀಡಿದ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಕೆ.ಜೆ ಜಾರ್ಜ್ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.