ಮೂರು ದಿನಗಳ ಹಿಂದೆ ಮೀನು ಹಿಡಿಯಲು ಹೋಗಿ ಶವವಾಗಿ ಮೇಲೆ ಬಂದ ಮಲ್ಲಿಕಾರ್ಜುನ ..!
ಮೃತನ ಶವ ಹೊರ ತೆಗೆದು ಮಾನವಿಯತೆ ಮೆರೆದ ಬಾಗೇವಾಡಿ ಪೊಲೀಸರು..!
ಬೆಳಗಾವಿ : ಮನೆಯಲ್ಲಿ ಹೇಳದೆ ಕೇಳದೆ ಗ್ರಾಮದ ಕೆರೆಗೆ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ನೀರು ಪಾಲಾಗಿ ಮೂರು ದಿನಗಳ ನಂತರ ಶವವಾಗಿ ಮೇಲೆ ಬಂದಿರುವ ಘಟನೆ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಪಕ್ಕದ ವೀರಪಿನಕೊಪ್ಪ ಗ್ರಾಮದ ಕೆರೆಯಲ್ಲಿ ನಡೆದಿದೆ.
ವೀರಪಿನಕೊಪ್ಪ ಗ್ರಾಮದ ಅಂಬೇಡ್ಕರ್ ಗಲ್ಲಿಯ ನಿವಾಸಿಯಾದ 46 ವರ್ಷದ ಮಲ್ಲಿಕಾರ್ಜುನ ಯಲ್ಲಪ್ಪಾ ಮಾದಿಗರ ಮೃತ ವ್ಯಕ್ತಿ. ಈತ ವಿಪರೀತವಾಗಿ ಸರಾಯಿ ಚಟಕ್ಕೆ ಅಂಟಿಕೊಂಡಿದ್ದನು. ಕುಡಿದ ಅಮಲಿನಲ್ಲಿ ಮನೆ ಬಿಟ್ಟು ಎರಡ್ಮೂರು ದಿನಗಳ ಕಾಲ ಹೊರ ಹೋಗುತಿದ್ದನು. ಹೀಗಾಗಿ ದಿ 3-11-2022 ರಂದು ಕೆರೆಗೆ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿದ್ದಾನೆ. ಆದರೆ ಈತ ಸಾಮಾನ್ಯವಾಗಿ ಮನೆಬಿಟ್ಟು ಹೋಗುತ್ತಿದ್ದರಿಂದ ಮನೆಯವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇಂದು (ನವೆಂಬರ್ 5) ಆತನ ಶವ ಊರಿನ ಕೆರೆಯ ನೀರಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಕಂಡವರು ಯಾರದೋ ಅಪರಿಚಿತ ಶವ ತೇಲಾಡುತ್ತಿರುವುದಾಗಿ ಬಾಗೇವಾಡಿ ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್ಐ ಅವಿನಾಶ್ ಯರಗೊಪ್ಪ, ಸಿಬ್ಬಂದಿ ಪ್ರಶಾಂತ ಅರೇರ್, ನಾಗಪ್ಪಾ ಸುತಗಟ್ಟಿ, ವಿಜಯ ಹತ್ತಿಕಟಗಿ ಮೃತ ಮಲ್ಲಿಕಾರ್ಜುನನ ಸ್ಥಳಕ್ಕೆ ಧಾವಿಸಿದ್ದಾರೆ. ಅಪರಿಚಿತ ಶವ ಎಂದು ತಿಳಿದು ಅಲ್ಲಿದ್ದವರು ಯಾರು ನೀರಿನಲ್ಲಿ ಇಳಿದು ಶವವನ್ನು ತೆಗೆಯಲು ಮಂದೆ ಬಂದಿಲ್ಲ. ಆಗ ಬಾಗೇವಾಡಿ ಪೊಲೀಸರು ತಾವೇ ನೀರಿನಲ್ಲಿ ಇಳಿದು ಶವ ಹೊರ ತೆಗೆದು ಮಾನವಿತೆ ಮೆರೆದಿದ್ದಾರೆ. ನಂತರ ಶವ ತಮ್ಮದೆ ಗ್ರಾಮದ ವ್ಯಕ್ತಿಯದೆಂದು ಗೊತ್ತಾದಾಗ ಗ್ರಾಮಸ್ಥರು ಸೇರಿಕೊಂಡು ಶವ ಎತ್ತಲು ಮುಂದೆ ಬಂದಿದ್ದಾಗಿ ತಿಳಿದು ಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬಾಗೇವಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.