ಬೀಜಿಂಗ್:
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಯ ನಂತರ ಎರಡು ದೇಶಗಳ ನಡುವೆ ರಾಜತಾಂತ್ರಿಕ ಕಲಹ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಬುಕ್ಕಿಂಗ್ ರದ್ದುಗೊಳಿಸಿದ್ದರಿಂದ ವಿಚಲಿತರಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು ‘ಚುರುಕುಗೊಳಿಸಬೇಕು’ ಎಂದು ಚೀನಾಕ್ಕೆ ಮನವಿ ಮಾಡಿದ್ದಾರೆ.
ಭಾರತ-ಮಾಲ್ಡೀವ್ಸ್ ವಿವಾದದ ನಡುವೆಯೇ ಚೀನಾ ಪ್ರವಾಸ ಕೈಗೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ದಕ್ಷಿಣ ಚೀನಾದ ಬಂದರು ನಗರದಲ್ಲಿರುವ “ಇನ್ವೆಸ್ಟ್ ಮಾಲ್ಡೀವ್ಸ್” ವೇದಿಕೆಯಲ್ಲಿ ಚೀನಾದ ಸ್ಥಳೀಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮಂಗಳವಾರ ಫುಝೌನಲ್ಲಿ, ಮೊಹಮ್ಮದ್ ಮುಯಿಝು ಅವರ ನಿಯೋಗವು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರನ್ನು ಬೀಜಿಂಗ್ನಲ್ಲಿ ತಮ್ಮ ವಾರದ ಭೇಟಿಯ ಸಮಯದಲ್ಲಿ ಭೇಟಿ ಮಾಡಲಿದ್ದಾರೆ. ಇಲ್ಲಿ, ಮೂಲಸೌಕರ್ಯದಿಂದ ಪ್ರವಾಸೋದ್ಯಮದವರೆಗಿನ ಒಪ್ಪಂದಗಳಿಗೆ ಉಭಯ ದೇಶಗಳ ನಡುವೆ ಸಹಿ ಹಾಕುವ ನಿರೀಕ್ಷೆಯಿದೆ.
ಮುಯಿಝು ಅವರು ಭಾರತದ ಬಹುದೊಡ್ಡ ಪ್ರಭಾವ ಮಾಲ್ಡೀವ್ಸ್ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದರು. ನಂತರ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಾಲ್ಡೀವ್ಸ್ ನಲ್ಲಿ ನೆಲೆಗೊಂಡಿದ್ದ ಭಾರತೀಯ ಸೇನೆಯನ್ನು ದೇಶವನ್ನು ತೊರೆಯುವಂತೆ ಕೇಳಿಕೊಂಡಿದ್ದರು, ಅಲ್ಲದೆ, ಮಾಲ್ಡೀವ್ಸ್ ಸಂಪ್ರದಾಯವನ್ನೂ ಮುರಿದಿದ್ದಾರೆ. ಮಾಲ್ಡೀವ್ಸ್ ನಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಅಧ್ಯಕ್ಷರು ಮೊದಲು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದರು. ಆದರೆ ಈ ಬಾರಿ ಮುಯಿಝು ಆ ಸಂಪ್ರದಾಯವನ್ನು ಮುರಿದು ಚೀನಾಕ್ಕೆ ಭೇಟಿ ನೀಡಿದ್ದಾರೆ.
ಚೀನಾ ಮಾಲ್ಡೀವ್ಸ್ನಲ್ಲಿ ಜಾಗತಿಕ ವ್ಯಾಪಾರ ಮತ್ತು ಮೂಲಸೌಕರ್ಯ ಜಾಲಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಅಡಿಯಲ್ಲಿ, ಚೀನಾವು ಮಾಲೆಯಲ್ಲಿ ವೆಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಿಸಲು ಸಹಾಯ ಮಾಡಿದೆ. ಸಮುದ್ರದ ಮೇಲೆ ಚೀನಾ-ಮಾಲ್ಡೀವ್ಸ್ ಸ್ನೇಹ ಸೇತುವೆ ನಿರ್ಮಿಸಿದೆ.
ಅಲ್ಲದೆ, ಕಳೆದ ವರ್ಷ, ಚೀನಾ ನ್ಯಾಷನಲ್ ಮೆಷಿನರಿ ಇಂಡಸ್ಟ್ರಿ ಕಾರ್ಪೊರೇಷನ್ ಮಾಲ್ಡೀವ್ಸ್ನ ಪ್ರವಾಸೋದ್ಯಮ ಕ್ಷೇತ್ರದಲ್ಲಿ $140 ಮಿಲಿಯನ್ ಹೂಡಿಕೆ ಮಾಡಿದೆ. 2019ರಲ್ಲಿ ಮಾಲ್ಡೀವ್ಸ್ ಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಲ್ಲಿ ಚೀನೀ ಪ್ರವಾಸಿಗರು ಶೇಕಡ 19.7ರಷ್ಟು ಪ್ರತಿನಿಧಿಸಿದ್ದರು. ಇದು ಅವರನ್ನು ಅತಿದೊಡ್ಡ ಪ್ರವಾಸಿ ಸಮೂಹವನ್ನಾಗಿ ಮಾಡಿದೆ.
ಪ್ರಧಾನಿ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಭೇಟಿ ವೇಳೆ ಅಲ್ಲಿನ ಕಡಲತೀರದಲ್ಲಿ ಅವರ ವೀಡಿಯೊವನ್ನು ಪೋಸ್ಟ್ ಮಾಡಿ ಲಕ್ಷದ್ವೀಪ ಪ್ರವಾಸೋದ್ಯಮದ ಬಗ್ಗೆ ಪಿಚ್ ಮಾಡಿದ ನಂತರ ಮಾಲ್ಡೀವ್ಸ್ನ ಕೆಲವು ಮಂತ್ರಿಗಳು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಎರಡು ದೇಶಗಳ ನಡುವೆ ರಾಜತಾಂತ್ರಿಕ ಗದ್ದಲಕ್ಕೆ ಕಾರಣವಾಗಿದೆ. ಇದರ ನಡುವೆ ಹೆಚ್ಚಿನ ಚೀನೀ ಪ್ರವಾಸಿಗರನ್ನು ಹೆಚ್ಚು ಕಳುಹಿಸುವಂತೆ ಅಧ್ಯಕ್ಷ ಮುಯಿಝು ಅವರ ಮನವಿ ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ಗಳಿಂದ ವಿವಾದ ಭುಗಿಲೆದ್ದ ನಂತರ ಮುಯಿಜ್ಜು ಸರ್ಕಾರವು ಮೂವರು ಉಪ ಮಂತ್ರಿಗಳನ್ನು ಅಮಾನತುಗೊಳಿಸಿದೆ.
ಮಾಲ್ಡೀವ್ಸ್ ಟೂರಿಸಂನಿಂದ ಸಚಿವರ ಹೇಳಿಕೆ ಖಂಡನೆ
ಅಲ್ಲದೆ, ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI) ಅವಹೇಳನಕಾರಿ ಕಾಮೆಂಟ್ಗಳನ್ನು ಬಲವಾಗಿ ಖಂಡಿಸಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಈ ಹಿಂದೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2023 ರಲ್ಲಿ ಭಾರತವು ದೇಶದ ಅತಿದೊಡ್ಡ ಪ್ರವಾಸಿ ಮಾರುಕಟ್ಟೆಯಾಗಿ ಉಳಿದಿದೆ. ಮಾಲ್ಡೀವ್ಸ್ಗೆ ಅತಿ ಹೆಚ್ಚು ಸಂದರ್ಶಕರು ಭಾರತದಿಂದ ಬಂದಿದ್ದು, ಭಾರತದಿಂದ 2,09,198 ಪ್ರವಾಸಿಗರು ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದು ಎರಡನೇ ಸ್ಥಾನದಲ್ಲಿದೆ ಮತ್ತು ಚೀನಾದ 1,87,118 ಪ್ರವಾಸಿಗರು ಭೇಟಿ ನೀಡಿದ್ದು ಮೂರನೇ ಸ್ಥಾನದಲ್ಲಿದೆ.
2022 ರಲ್ಲಿ, ಭಾರತದ 2,40,000 ಪ್ರವಾಸಿಗರು ಭೇಟಿ ನೀಡಿದ್ದು ಭಾರತವು ಅಗ್ರ ಮಾಲ್ಡೀವ್ಸ್ ಪ್ರವಾಸೋದ್ಯಮ ಮಾರುಕಟ್ಟೆಯಾಗಿ ಉಳಿದಿತ್ತು. ರಷ್ಯಾ 1,98,000 ಪ್ರವಾಸಿಗರೊಂದಿಗೆ ಎರಡನೇ ಸ್ಥಾನದಲ್ಲಿತ್ತು ಮತ್ತು 1,77,000 ಕ್ಕೂ ಜನ ಪ್ರವಾಸಿಗರು ಭೇಟಿ ನೀಡುವುದರೊಂದಿಗೆ ಬ್ರಿಟನ್ ಮೂರನೇ ಸ್ಥಾನದಲ್ಲಿತ್ತು.
ಕೋವಿಡ್ಗಿಂತ ಮೊದಲು, 2019ರಲ್ಲಿ ಚೀನಾದ 2.80 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು ಅದು ಅಗ್ರಸ್ಥಾನವನ್ನು ಹೊಂದಿತ್ತು ಆದರೆ ಸುಮಾರು ನಾಲ್ಕು ವರ್ಷಗಳ ಲಾಕ್ಡೌನ್ ನೀತಿ ಮತ್ತು ಅದರ ಆರ್ಥಿಕತೆಯ ನಿಧಾನಗತಿಯಿಂದಾಗಿ ಪ್ರಸ್ತುತ ತನ್ನ ದೇಶೀಯ ಮತ್ತು ವಿದೇಶಿ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಅದು ಹೆಣಗಾಡುತ್ತಿದೆ. ಇದರ ಪರಿಣಾಮವಾಗಿ, ಕೋವಿಡ್ಗೂ ಮುನ್ನ ಲಕ್ಷಾಂತರ ಸಂಖ್ಯೆಯಲ್ಲಿ ರಜಾದಿನಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಿದ ಚೀನೀ ಪ್ರವಾಸಿಗರು ಈಗ ಆರ್ಥಿಕ ಹಿಂಜರಿತದಿಂದಾಗಿ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುತ್ತಿದ್ದಾರೆ.