ವಿಜಯಪುರ :
ಗೋದಾಮಿನ ಕುಸಿದ ಮೂಟೆಗಳ ಅಡಿಯಲ್ಲಿ ಸಿಲುಕಿದ್ದ ದುರಂತದಲ್ಲಿ ಮತ್ತೆ ಇಬ್ಬರು ಕಾರ್ಮಿಕರ ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 7ಕ್ಕೆ ಏರಿದೆ. ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘಟಕದ ಮಾಲೀಕ ಘೋಷಣೆ ಮಾಡಿದ್ದಾರೆ.
ಸೋಮವಾರ ಸಂಜೆ ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ರಾಜಗುರು ಫುಡ್ ಪ್ರೊಸೆಸ್ ಘಟಕದಲ್ಲಿ ಗೋವಿನಜೋಳ ತುಂಬಿರಿಸಿದ್ದ ಚೀಲಗಳ ನಿಟ್ಟು ಕುಸಿದು ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಬಿದ್ದಿದೆ. ಘಟನೆಯಲ್ಲಿ ಮೂಟೆಗಳ ಅಡಿಯಲ್ಲಿ ಸಿಲುಕಿದ್ದ ಬಿಹಾರ ಮೂಲದ ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದರು.
ದುರಂತದಲ್ಲಿ ಸಿಲುಕಿದ್ದ ಐವರು ಕಾರ್ಮಿಕರು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಸಂಜೆ 6 ಗಂಟೆಯಿಂದಲೇ ಆರಂಭವಾದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅಪಾಯದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಾಣೆಗಾಗಿ ಜಿಲ್ಲಾಡಳಿತ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಓರ್ವನನ್ನು ರಕ್ಷಿಸಿತ್ತು. ಪುಣೆಯ ಎನ್ ಡಿ ಆರ್ ಎಫ್ ಸೇರಿದಂತೆ ನಾನಾ ರಕ್ಷಣಾ ತಂಡಗಳು ಕಾರ್ಮಿಕರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿವೆ. ಇಡೀ ರಾತ್ರಿ ಕಾರ್ಯಾಚರಣೆ ಬಳಿಕ ಐವರು ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಬಿಹಾರ ಮೂಲದ ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ (29), ಸಂಬೂ ಮುಖಿಯಾ (26), ರಾಮ್ ಬಾಲಕ್ (52), ಲುಖೋ ಜಾಧವ್ (45) ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆ ಹಂತದಲ್ಲಿ ಆಹಾರ ಸಂಸ್ಕರಣಾ ಘಟಕದ ಮೇಲ್ಭಾಗ ಕುಸಿದು, ಧಾನ್ಯ ತುಂಬಿದ ಚೀಲಗಳ ಮೇಲೆ ಬಿದ್ದಿದೆ. ಅದರ ಅಡಿಯಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಇನ್ನೂ ಸುಮಾರು 9 ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ.
ಘಟನೆಯ ಮಾಹಿತಿ ತಿಳಿಯುತ್ತಲೇ ಬೆಳಗಾವಿ ಅಧಿವೇಶನದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಡರಾತ್ರಿ 1 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಜಿಲ್ಲಾಡಳಿತದಿಂದ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದರು. ಹಾಗೂ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಈ ದುರ್ಘಟನೆಯಲ್ಲಿ ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಇಲ್ಲದೆ, ಇಂಡಸ್ಟ್ರಿಯ ಮಾಲೀರಿಂದಲೂ ಸೂಕ್ತ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಕಾರ್ಮಿಕರಿಗೆ ಭರವಸೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ, ಬೆಳಗಾವಿ ಅಧಿವೇಶನದಿಂದ ನೇರವಾಗಿ ಬಂದಿದ್ದೇನೆ. ಈಗ ಮೆಕ್ಕೆಜೋಳದ ರಾಶಿಯಡಿ ಸಿಲುಕಿರುವ ಕಾರ್ಮಿಕರನ್ನು ಹೊರ ತೆಗೆಯಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಘಟನೆಯಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ಹೊರತೆಗೆದು ಶವಪರೀಕ್ಷೆಯ ಬಳಿಕ ಬಿಹಾರದ ಆಯಾ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಕಾರ್ಮಿಕರ ಊರುಗಳಿಗೆ ಪಾರ್ಥಿವ ಶರೀರ ಕಳುಹಿಸಲು ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.