ದೆಹಲಿ:
ಕೇಂದ್ರ ಸರ್ಕಾರದಿಂದ ರಾಜ್ಯಗಳ ವಿಧಾನಸಭೆ, ಸಂಸತ್ ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ವಿಶೇಷ ಸಂಸತ್ ಅಧಿವೇಶನದಲ್ಲಿ ನಿನ್ನೆ ಮಂಡಿಸಲಾಗಿತ್ತು. ಸುದೀರ್ಘ 8 ಗಂಟೆಗಳ ಚರ್ಚೆಯ ಬಳಿಕ, ಇಂದು ಲೋಕಸಭೆಯಲ್ಲಿ ಸಂಸದರಿಂದ ಮತ ಪತ್ರಗಳ ಮೂಲಕ ವಿಧೇಯ ಪರ, ವಿರೋಧ ಬೆಂಬಲಿಸಿ ಮತದಾನ ನಡೆಯಿತು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಹೆಚ್ಚು ಮತಗಳು ಪರವಾಗಿ ಬೀಳುವ ಮೂಲಕ ಅಂಗೀಕಾರಗೊಂಡಿದೆ.
ನಿನ್ನೆ ನೂತನ ಸಂಸತ್ ಭವನದಲ್ಲಿ ಸರ್ಕಾರವು ಮೊದಲ ಮಸೂದೆಯನ್ನ ಲೋಕಸಭೆಯ ಕಲಾಪಗಳಲ್ಲಿ ಪರಿಚಯಿಸಿತು. ಮೊದಲ ಮಸೂದೆ ಮಹಿಳಾ ಮೀಸಲಾತಿಗೆ ಸಂಬಂಧಿಸಿದ್ದು, ಇದಕ್ಕೆ ‘ನಾರಿ ಶಕ್ತಿ ವಂದನಾ ಕಾಯ್ದೆ’ ಎಂದು ಹೆಸರಿಡಲಾಗಿತ್ತು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯಡಿ 181 ಲೋಕಸಭಾ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು.
ವಿಧಾನಸಭೆಯ ಶೇ.33ರಷ್ಟು ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗಿದೆ. ದೆಹಲಿ ವಿಧಾನಸಭೆಯಲ್ಲಿ ಶೇಕಡಾ 33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ 84 ಸ್ಥಾನಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮತ್ತು ಶೇ.33ರಷ್ಟು ಸ್ಥಾನಗಳನ್ನ ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. ಇದೇ ರೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಮಹಿಳಾ ಮೀಸಲಾತಿಯನ್ನು ಕಲ್ಪಿಸುವುದು ವಿಧೇಯಕರ ಮುಖ್ಯ ಉದ್ದೇಶವಾಗಿದೆ.
ಇಂತಹ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ನಿನ್ನೆಯಿಂದ ಲೋಕಸಭೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ಚರ್ಚೆಯನ್ನು ನಡೆಸಲಾಯಿತು.
ಪರ, ವಿರೋಧದ ಚರ್ಚೆಯಾದ ನಂತ್ರ, ನೂತನ ಸಂಸತ್ ಭವನದಲ್ಲಿನ ಮೊದಲ ಬಿಲ್ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಮತಕ್ಕೆ ಹಾಕುವುದಕ್ಕೆ ಸೂಚಿಸಿದ್ದರು. ಈ ಬಳಿಕ ಸಂಸದರಿಂದ ಮತ ಪತ್ರಗಳ ಮೂಲಕ ಮತದಾನ ನಡೆಯಿತು.
ಲೋಕಸಭಾ ಸದಸ್ಯರು ಮತ ಪತ್ರಗಳ ಮೂಲಕ ಮಹಿಳಾ ಮೀಸಲಾತಿ ವಿಧೇಯಕ ಸಂಬಂಧ ತಮ್ಮ ಮತಗಳನ್ನು ಚಲಾಯಿಸಿದರು. ಹೀಗೆ ನಡೆದಂತ ಮತದಾನದಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಪರವಾಗಿ ಹೆಚ್ಚು ಮತಗಳು ಚಲಾವಣೆಗೊಳ್ಳುವ ಮೂಲಕ, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಹೊಸ ಸಂಸತ್ ಭವನ ಸಾಕ್ಷಿಯಾಗಿದೆ.