ಬೆಳಗಾವಿ: ಬೆಳಗಾವಿಯ ಗಿಲಗಿಂಚಿ ಅರಟಾಳ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಅವರ ಜನ್ಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಚಾರ್ಯ ಆರ್.ಎಸ್. ಪಾಟೀಲ ಅವರು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ದೇಶದ 140 ಕೋಟಿ ಜನರ ನಾಡಿಮಿಡಿತವನ್ನು ಹೊಂದಿವೆ. ಇಂತಹ ಮಹಾಕಾವ್ಯಗಳು ಜಗತ್ತಿನಲ್ಲಿ ಮತ್ತೊಂದು ಇಲ್ಲ. ಅಷ್ಟೊಂದು ಪರಿಣಾಮಕಾರಿಯಾದ ರೀತಿಯಲ್ಲಿ ಈ ಮಹಾಕಾವ್ಯಗಳು ಸಮಾಜದ ಮೇಲೆ ಪರಿಣಾಮ ಬೀರಿವೆ. ಆದರ್ಶ ಜೀವನ ಹಾಗೂ ಸುಂದರ ವ್ಯಕ್ತಿತ್ವವನ್ನು ರೂಪಿಸುವುದನ್ನು ಕಲಿಸಿಕೊಟ್ಟಿವೆ. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚಿಸುವ ಮೂಲಕ ಇಡೀ ವಿಶ್ವಕ್ಕೆ ಆದರ್ಶವಾದ ಮಹಾಕಾವ್ಯವನ್ನು ನೀಡಿದ್ದಾರೆ. ರಾಮಾಯಣ ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. ರಾಮಾಯಣದ ರಾಮ-ಲಕ್ಷ್ಮಣ-ಭರತ ಅವರ ಆದರ್ಶ ವ್ಯಕ್ತಿತ್ವವನ್ನು ಇಂದಿನ ಯುವಜನತೆ ಅಳವಡಿಸಿಕೊಂಡು ಜೀವನವನ್ನು ಸುಖಮಯಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು. ಉಪನ್ಯಾಸಕ ಟಿ.ಪಿ. ಬಾನಕರೆ ವಾಲ್ಮೀಕಿಯ ಜೀವನ ಚರಿತ್ರೆ ವಿವರಿಸಿದರು.
ಕೆಎಲ್ ಇ ಸಂಸ್ಥೆಯ ಆಜೀವ ಸದಸ್ಯ ಮಹಾದೇವ ಬಳಿಗಾರ, ಉಪ ಪ್ರಾಚಾರ್ಯ ಸಿ.ಪಿ.ದೇವಋಷಿ ಹಾಜರಿದ್ದರು.
ಶ್ರೀ ದೇವಿ ಗುಮ್ಮಗೋಳ ವಂದಿಸಿದರು. ದಿವ್ಯಾ ಪಾಲಭಾವಿ ಸ್ವಾಗತಿಸಿದರು. ಶಿಲ್ಪಾ ದೇವಲಾಪುರ ನಿರೂಪಿಸಿದರು.