ಲಖನೌ: ಉತ್ತರ ಪ್ರದೇಶದಲ್ಲಿರುವ 75 ಜೈಲುಗಳಲ್ಲಿರುವ ಕೈದಿಗಳಿಗೆ ಪುಣ್ಯಸ್ನಾನವನ್ನು ದೊರಕಿಸುವ ಉದ್ದೇಶದಿಂದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂಗಮದಲ್ಲಿನ ನೀರು ತರಿಸಲು ಬಂದೀಖಾನೆ ಇಲಾಖೆ ವ್ಯವಸ್ಥೆ ಮಾಡಿದೆ.
ಈ ಕಾರ್ಯಕ್ರಮವು ರಾಜ್ಯದ ಎಲ್ಲಾ ಜೈಲುಗಳಲ್ಲಿ ಫೆ. 21ರಂದು ಬೆಳಿಗ್ಗೆ 9.30ರಿಂದ 10ರವರೆಗೆ ಪುಣ್ಯ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬಂದೀಖಾನೆ ಸಚಿವ ದಾರಾ ಸಿಂಗ್ ಚವ್ಹಾಣ್ ಅವರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದ 75 ಜೈಲುಗಳಲ್ಲಿ ಒಟ್ಟು 90 ಸಾವಿರ ಕೈದಿಗಳಿದ್ದಾರೆ. ಇವುಗಳಲ್ಲಿ ಏಳು ಕೇಂದ್ರ ಕಾರಾಗೃಹಗಳಿವೆ.
ಪ್ರತಿ 12 ವರ್ಷಗಳಿಗೆ ಒಮ್ಮೆ ಕುಂಭ ಮೇಳ ಆಯೋಜಿಸಲಾಗುತ್ತದೆ. ಆದರೆ ಈ ಬಾರಿ ಆಯೋಜಿಸಲಾಗಿರುವ ಮಹಾಕುಂಭ ಮೇಳವು 144 ವರ್ಷಗಳಿಗೆ ಒಮ್ಮೆ ನಡೆಯುವಂತದ್ದು ಎಂದು ಆಯೋಜಕರು ಹೇಳಿದ್ದಾರೆ. ಜ. 13ರಿಂದ ಆರಂಭವಾಗಿರುವ ಕುಂಭಮೇಳ ಫೆ. 26ರಂದು ಕೊನೆಗೊಳ್ಳಲಿದೆ.