ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಗುರುವಾರ ಪೂರ್ವಭಾವಿ ಸಭೆ ನಡೆಸಿದರು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಂಗನವಾಡಿಯಲ್ಲಿ ಆರಂಭಿಸಲಾಗುವ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಚಿಲಿಪಿಲಿ 2.0 ಪಠ್ಯಕ್ರಮ ಆಳವಡಿಕೆ, ಶಿಕ್ಷಣ ಇಲಾಖೆಯ ಪೂರ್ವ ಪ್ರಾಥಮಿಕ ತರಗತಿಗಳಿಗೆ ಈಗಾಗಲೇ ದಾಖಲಾಗಿರುವ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ, ತೂಕ ಮತ್ತು ಅಳತೆ ಬಗ್ಗೆಯೂ ಗಮನಹರಿಸಬೇಕು ಎಂದು ಉಭಯ ಸಚಿವರು ಚರ್ಚೆ ನಡೆಸಿದರು.
ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರಶ್ಮಿ ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳಾದ ಡಾ.ಟಿ.ಎಚ್.ವಿಶ್ವನಾಥ್, ಕಿಶೋರ್ ಕುಮಾರ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಸೇರಿದಂತೆ ಎರಡು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಂಗ್ರೆಸ್ ಮಾಡೆಲ್ಗಳನ್ನು ಕಾಪಿ ಮಾಡುವುದೇ ಬಿಜೆಪಿ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕೆ
*ಬೆಂಗಳೂರು: ಬಿಜೆಪಿಯವರು ಮಾತನಾಡುವುದು ಒಂದು, ಮಾಡುವುದು ಮತ್ತೊಂದು. ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಹೊಡೆದು ಪಾಸಾಗಿರುವ ಸ್ಟೂಡೆಂಟ್ಸ್ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕಿಸಿದ್ದಾರೆ.
ಮುಂಬರುವ ಬಿಹಾರ ಚುನಾವಣೆಗೆ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಘೋಷಿಸಿರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ನರೇಗಾ, ಆಧಾರ್ ಕಾರ್ಡ್ ಜಾರಿಗೆ ತರುವುದನ್ನು ವಿರೋಧ ಮಾಡಿದ್ದರು. ದೇಶದಲ್ಲಿ ಉತ್ತಮ ಯೋಜನೆಗಳನ್ನು ವಿರೋಧಿಸಿದರು. ಆದರೀಗ ನಮ್ಮ ಯೋಜನೆಗಳನ್ನೇ ಅನುಸರಿಸುತ್ತಿದ್ದಾರೆ ಎಂದರು.
ಮಹಿಳಾ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ಮಾಡಿದ್ದೆವು. ಇದೀಗ ಕರ್ನಾಟಕದಲ್ಲಿ ಯಶಸ್ವಿಯಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದನ್ನು ನೋಡಿದ ಬಿಜೆಪಿಗರು, ಮಹಾರಾಷ್ಟ್ರ, ದೆಹಲಿಯಲ್ಲಿ ನಮ್ಮ ಯೋಜನೆಗಳನ್ನು ಘೋಷಣೆ ಮಾಡಿ ಚುನಾವಣೆ ಗೆದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.
ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಆದರೆ, ಕರ್ನಾಟಕ ಮಾಡೆಲ್ ಇಟ್ಟುಕೊಂಡು ನರೇಂದ್ರ ಮೋದಿ ರಾಜಕಾರಣ ಮಾಡುತ್ತಿದ್ದಾರೆ. ಕರ್ನಾಟಕದ ಯೋಜನೆಗಳನ್ನು ಹಾಗೂ ಮಾಡೆಲ್ ಅನ್ನು ಟೀಕೆ ಮಾಡುವ ನೈತಿಕತೆ ಇದೆಯೇ ಎಂದು ಸಚಿವರು ಪ್ರಶ್ನಿಸಿದರು.
* *ಪೀಠಕ್ಕೆ ಬೀಗ ಹಾಕಿದ್ದು ಸರಿಯಿಲ್ಲ
ಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಈ ವಿಷಯದಲ್ಲಿ ನಾನು ಕಾಂಗ್ರೆಸ್, ಬಿಜೆಪಿ ಅಂತ ಮಾತನಾಡುವುದಿಲ್ಲ. ಪೀಠಕ್ಕೆ ಬೀಗ ಹಾಕಿದ್ದು ಸಭ್ಯತೆ ಅಲ್ಲ. ಇದನ್ನು ಖಂಡಿಸುತ್ತೇನೆ. ನಾನು ಗುರುಗಳ ಸಂಪರ್ಕದಲ್ಲಿದ್ದೇನೆ. ಶ್ರೀಗಳು ನಾಡಿದ್ದು ಬೆಳಗಾವಿಗೆ ಬರುತ್ತಿದ್ದು, ಈ ಬಗ್ಗೆ ಗುರುಗಳ ಜೊತೆ ಮಾತನಾಡುತ್ತೇನೆ ಎಂದರು.
ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮಾತಿಗೆ ಬೆಲೆ ಕೊಡುವುದು ಬೇಡ. ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಲಕ್ಷ್ಮೀ ಹೆಬ್ಬಾಳಕರ್ ಏನು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ. ಸರ್ಕಾರದಲ್ಲಿ ನಾವು ಏನು ಒತ್ತಡ ಹೇರುತ್ತಿದ್ದೇವೆ ಎಂದು ಬೆಲ್ಲದ್ ಅವರಿಗೆ ಗೊತ್ತಿಲ್ಲ ಎಂದು ಸಚಿವರು ತಿರುಗೇಟು ನೀಡಿದರು.