ಬೆಳಗಾವಿ : ತಾನು ಓಡಿಸುತ್ತಿದ್ದ ಆಟೋದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮುನವಳ್ಳಿಯ ನಾಗಲಿಂಗನಗರದ ರಾಘವೇಂದ್ರ ನಾರಾಯಣ ಜಾಧವ
(28)ಮತ್ತು ರಂಜಿತಾ ಅಡಿವೆಪ್ಪ ಚೋಬಾರಿ (25) ಎಂದು ಗುರುತಿಸಲಾಗಿದೆ.
ಇವರು ಪ್ರೇಮಿಗಳು. ಹಲವು ವರ್ಷಗಳಿಂದ ಪ್ರೇಮಿಸುತ್ತಿದ್ದರು. ಆದರೆ ಇವರ ವಿವಾಹಕ್ಕೆ ಮನೆಯವರು ಒಪ್ಪಿಗೆ ನೀಡಿರಲಲ್ಲ. ಈ ನಡುವೆ ಇತ್ತೀಚಿಗೆ ರಂಜಿತಾಗೆ ಬೇರೆ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು. ಇದರಿಂದ ಬೇಸರಗೊಂಡ ಇಬ್ಬರು ಆಟೋದಲ್ಲಿ ಬಂದು ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ :
ಯರಗಟ್ಟಿ ಸಮೀಪದಲ್ಲಿರುವ, ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ಪ್ರೇಮಿಗಳು ಆಟೊ ರಿಕ್ಷಾದಲ್ಲಿಯೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಹಿರೇನಂದಿ ಗ್ರಾಮವು ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮಕ್ಕೆ ಹೊಂದಿಕೊಂಡಿದೆ. ಮಂಗಳವಾರ ಬೆಳಿಗ್ಗೆ ಸತ್ತಿಗೇರಿ ಗ್ರಾಮಸ್ಥರಿಗೆ ವಿಷಯ ಗೊತ್ತಾಗಿದೆ. ಪ್ರೇಮಿಗಳು ಸೋಮವಾರ ರಾತ್ರಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ರಾಘವೇಂದ್ರ ಹಾಗೂ ರಂಜಿತಾ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಚೆಗೆ ರಂಜಿತಾ ಅವರಿಗೆ ಬೇರೊಬ್ಬ ಹುಡುಗನ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆಟೊದ ಮೇಲಿನ ಕಬ್ಬಿಣ ಸಲಾಖೆಗೆ ಹಗ್ಗ ಕಟ್ಟಿದ್ದು, ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟಂಥ ಸ್ಥಿತಿಯಲ್ಲಿ ಪತ್ತೆಯಾಗಿವೆ.
ನಮ್ಮ ಸಹೋದರ ಪ್ರೀತಿಯ ವಿಚಾರವಾಗಿ ಮನೆಯಲ್ಲಿ ಏನೂ ಹೇಳಿಲ್ಲ. ಅವನು ಆಟೊ ಓಡಿಸುತ್ತಿದ್ದ.
ಸೋಮವಾರ ಮಧ್ಯಾಹ್ನ ಆಟೊ ತೆಗೆದುಕೊಂಡು ಕೆಲಸಕ್ಕೆ ಹೋದವನು ಮತ್ತೆ ಮನೆಗೆ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಪೊಲೀಸರು ವಿಷಯ ತಿಳಿಸಿದಾಗಲೇ ಘಟನೆ ಗೊತ್ತಾಗಿದೆ. ಚಿಕ್ಕ ಆಟೊದಲ್ಲಿಯೇ ಇಬ್ಬರೂ ಹಗ್ಗದಿಂದ ನೇಣು ಹಾಕಿಕೊಂಡ ರೀತಿ ಪತ್ತೆಯಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ತಿಳಿಯುತ್ತಿಲ್ಲ. ಪೊಲೀಸರು ತನಿಖೆ ಮಾಡಬೇಕು’ ಎಂದು ರಾಘವೇಂದ್ರ ಅವರ ಸಹೋದರ ಸೋಮನಾಥ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.