ಬೆಂಗಳೂರು :
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲಾ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಸೂಚನೆ ನೀಡಿದ್ದಾರೆ.
ಇದೇ ಜೂನ್ 30 ರೊಳಗೆ ಎಲ್ಲಾ ಶಾಸಕರ ಆಸ್ತಿ ವಿವರ ಸಲ್ಲಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಗಡುವು ನೀಡಿದ್ದಾರೆ. ಈ ಮೊದಲು ಆದೇಶ ನೀಡಿ 15 ದಿನ ಕಳೆದರೂ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಹೀಗಾಗಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ ಅವರು ಎಲ್ಲಾ ಪಕ್ಷದ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮೌಖಿಕ ಸೂಚನೆ ನೀಡಿದ್ದಾರೆ.
ಕಳೆದ ಬಾರಿ ಆಸ್ತಿ ವಿವರ ಸಲ್ಲಿಸಿದ್ದೇವೆಂದು ಮರು ಆಯ್ಕೆಯಾದವರು ಸುಮ್ಮನೆ ಕೂರುವಂತಿಲ್ಲ. ಪುನರ್ ಆಯ್ಕೆಯಾದ ಶಾಸಕರು ಮತ್ತೊಮ್ಮೆ ಆಸ್ತಿ ವಿವರ ಸಲ್ಲಿಸಬೇಕು. ಮೊದಲ ಬಾರಿ ಆಯ್ಕೆಯಾದ ಶಾಸಕರು ಕೂಡ ಆಸ್ತಿ ವಿವರ ಸಲ್ಲಿಸಬೇಕು. ಒಂದು ವೇಳೆ ಜೂನ್ 30 ರೊಳಗೆ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಬಾರಿ ಶಾಸಕರು ಸರಿಯಾದ ಮಾದರಿಯಲ್ಲಿ ಆಸ್ತಿ ವಿವರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಸಮಸ್ಯೆ ಆಗಬಾರದೆಂದು ಶಾಸಕರ ಕಡ್ಡಾಯ ಆಸ್ತಿ ವಿವರ ಪಡೆಯಲು ಲೋಕಾಯುಕ್ತ ಸೆಕ್ರೆಟರಿಗೆ ಸೂಚಿಸಿದ್ದಾರೆ.