ನವದೆಹಲಿ: ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳಲ್ಲಿ ನಾಲ್ಕು ನಾಮಿನಿಗಳನ್ನು ಹೊಂದಲು ಅನುಮತಿಸುವ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ- 2024 ಅನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಾಯೋಗಿಕವಾಗಿ ಮಂಡಿಸಿದ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಸಬ್ಸ್ಟಾನ್ಷಿಯಲ್ ಇಂಟರೆಸ್ಟ್ ನಿಯಮದಲ್ಲಿಯೂ ಬದಲಾವಣೆ ಆಗಲಿದೆ. ಇದು ಸುಮಾರು ಆರು ದಶಕಗಳ ಹಿಂದೆ ನಿಗದಿಪಡಿಸಲಾದ ಪ್ರಸ್ತುತ ಮಿತಿ ₹ 5 ಲಕ್ಷದ ಬದಲಿಗೆ ₹ 2 ಕೋಟಿಗೆ ಹೆಚ್ಚಾಗಬಹುದು. ಯಾವುದೇ ಕಂಪೆನಿಯಲ್ಲಿ ನಿರ್ದೇಶಕರು 5 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದರೆ ಅನ್ನು ಸಬ್ಸ್ಟಾನ್ಷಿಯಲ್ ಇಂಟರೆಸ್ಟ್ ಎಂದು ಕರೆಯಲಾಗುತ್ತದೆ. ಅಂತಹ ನಿರ್ದೇಶಕರಿಗೆ ಸಾಲ ನೀಡಲು ಆಡಳಿತ ಮಂಡಳಿಯ ಅನುಮೋದನೆ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ನಿರ್ದೇಶಕರು 5 ಲಕ್ಷ ರೂ.ಗಳ ಬದಲು 2 ಕೋಟಿ ರೂ.ವರೆಗಿನ ಆಸ್ತಿ ಹೊಂದಲು ಅವಕಾಶ ನೀಡಲಾಗಿದೆ.
ನಿರ್ದೇಶಕರ ಅಧಿಕಾರಾವಧಿ ಹೆಚ್ಚಳ
ಸಹಕಾರಿ ಬ್ಯಾಂಕ್ಗಳ ನಿರ್ದೇಶಕರ ಅಧಿಕಾರದ ಅವಧಿಯನ್ನು (ಅಧ್ಯಕ್ಷರು ಮತ್ತು ಪೂರ್ಣಾವಧಿ ನಿರ್ದೇಶಕರನ್ನು ಹೊರತುಪಡಿಸಿ) 8 ವರ್ಷದಿಂದ 10 ವರ್ಷಗಳಿಗೆ ಹೆಚ್ಚಿಸಲು ಮಸೂದೆ ಪ್ರಸ್ತಾಪಿಸಿದೆ. ಅಲ್ಲದೆ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಿಗೆ ರಾಜ್ಯ ಸಹಕಾರಿ ಬ್ಯಾಂಕ್ನ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ. ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಪಾವತಿಸಬೇಕಾದ ಸಂಭಾವನೆಯನ್ನು ನಿರ್ಧರಿಸುವಲ್ಲಿ ಬ್ಯಾಂಕ್ಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲು ಸಹ ಉದ್ದೇಶಿಸಲಾಗಿದೆ.
ಆರ್ಬಿಐಗೆ ಬ್ಯಾಂಕ್ಗಳು ಪ್ರತೀ 2ನೇ ಮತ್ತು 4ನೇ ಶುಕ್ರವಾರ ವರದಿ ಸಲ್ಲಿಸಬೇಕಿತ್ತು. ಅದನ್ನು ತಿಂಗಳ 15ನೇ ತಾರೀಕು ಮತ್ತು ತಿಂಗಳ ಕೊನೆಯ ತಾರೀಕಿಗೆ ಬದಲಾಯಿಸಲಾಗಿದೆ.
ಬಿಲ್ ಮೇಲಿನ ಚರ್ಚೆಗೆ ಉತ್ತರಿಸಿದ ಸೀತಾರಾಮನ್, ಠೇವಣಿದಾರರಿಗೆ ಸತತ ಅಥವಾ ಏಕಕಾಲಿಕ ನಾಮನಿರ್ದೇಶನ ಸೌಲಭ್ಯದ ಆಯ್ಕೆ ಇರುತ್ತದೆ, ಆದರೆ ಲಾಕರ್ ಹೊಂದಿರುವವರು ಸತತ ನಾಮನಿರ್ದೇಶನವನ್ನು ಮಾತ್ರ ಹೊಂದಿರುತ್ತಾರೆ ಎಂದು ಹೇಳಿದರು. “ನಮ್ಮ ಬ್ಯಾಂಕುಗಳನ್ನು ಸುರಕ್ಷಿತವಾಗಿ, ಸ್ಥಿರವಾಗಿ, ಆರೋಗ್ಯಕರವಾಗಿರಿಸುವುದು ನಮ್ಮ ಉದ್ದೇಶವಾಗಿದೆ ಮತ್ತು 10 ವರ್ಷಗಳ ನಂತರ ನೀವು ಫಲಿತಾಂಶವನ್ನು ನೋಡುತ್ತಿದ್ದೀರಿ” ಎಂದು ಸೀತಾರಾಮನ್ ಹೇಳಿದರು.
“ಪ್ರಸ್ತಾವಿತ ತಿದ್ದುಪಡಿಗಳು ಬ್ಯಾಂಕಿಂಗ್ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುತ್ತವೆ ಮತ್ತು ಹೂಡಿಕೆದಾರರ ಹಿತ ರಕ್ಷಣೆಯನ್ನು ಖಚಿತಪಡಿಸುತ್ತವೆ. ಅಲ್ಲದೆ, ಗ್ರಾಹಕರ ಅನುಕೂಲವನ್ನು ಹೆಚ್ಚಿಸುತ್ತವೆ” ಎಂದು ಅವರು ಬಣ್ಣಿಸಿದ್ದಾರೆ. ಬಿಜೆಪಿಯ ಕೊಂಡಾ ವಿಶ್ವೇಶ್ವರ ರೆಡ್ಡಿ ಮಾತನಾಡಿ, ಈ ಮಸೂದೆಯು ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲಿದೆ. ಹೀಗಾಗಿ ಎಲ್ಲ ಪಕ್ಷಗಳೂ ಸಗಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಸೂದೆಯನ್ನು “ಭಾರತೀಯ ಬ್ಯಾಂಕಿಂಗ್ ವಲಯದ ಖಾಸಗೀಕರಣದ ಕಡೆಗೆ ಹಾದಿ” ಎಂದು ಬಣ್ಣಿಸುವುದರೊಂದಿಗೆ ವಿರೋಧ ಪಕ್ಷದ ಸದಸ್ಯರು ಇದನ್ನು ತೀವ್ರವಾಗಿ ಟೀಕಿಸಿದರು. ಮಸೂದೆಯು ಮೇಲ್ನೋಟಕ್ಕೆ ಬ್ಯಾಂಕ್ ಗ್ಯಾರಂಟಿಗಳು ಮತ್ತು ಹೂಡಿಕೆದಾರರ ರಕ್ಷಣೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆಯಾದರೂ, ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಸರ್ಕಾರದ ಕನಿಷ್ಠ ಹಿಡುವಳಿಯನ್ನು 51 ರಿಂದ 26 ಪ್ರತಿಶತಕ್ಕೆ ಇಳಿಸುವುದು ಇದರ ನಿಜವಾದ ಉದ್ದೇಶವಾಗಿದೆ ಎಂದು ಅವರು ವಾದಿಸಿದರು. ಬ್ಯಾನರ್ಜಿ ಅವರು ಸೈಬರ್ ಸುರಕ್ಷತೆಯ ಕಾಳಜಿಯನ್ನು ಸಹ ಫ್ಲ್ಯಾಗ್ ಮಾಡಿದರು, ವಂಚನೆಯನ್ನು ಪತ್ತೆಹಚ್ಚಲು ಮತ್ತು ಡೇಟಾ ಗೌಪ್ಯತೆ ನಿಯಮಗಳಿಗೆ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ಐಟಿ ವ್ಯವಸ್ಥೆಗಳ ಅಗತ್ಯದ ಬಗ್ಗೆ ಅವರು ಪ್ರತಿಪಾದಿಸಿದರು.
ಕಾಂಗ್ರೆಸ್ ಸದಸ್ಯ ಕಾರ್ತಿ ಚಿದಂಬರಂ ಅವರು ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅದನ್ನು ತಡೆಯಲು ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಏನೂ ಬದಲಾಗದಿದ್ದರೂ ಸಹ ಕೆವೈಸಿ (KYC) ವಿವರಗಳನ್ನು ನವೀಕರಿಸಲು ಒಂದು ವರ್ಷದಲ್ಲಿ ಜನರು ತಮ್ಮ ಬ್ಯಾಂಕ್ಗಳಿಂದ ಬಹು ಕರೆಗಳನ್ನು ಸ್ವೀಕರಿಸುತ್ತಿರುವುದರಿಂದ ಅದನ್ನು ನಿಲ್ಲಿಸಬೇಕು ಎಂದು ಚಿದಂಬರಂ ಹೇಳಿದರು.
ಕೊಂಡ ವಿಶ್ವೇಶ್ವರ್ ರೆಡ್ಡಿ (ಬಿಜೆಪಿ) ಅವರು ಈ ಮಸೂದೆಯಲ್ಲಿ ಆಡಳಿತವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಎಲ್ಲಾ ಪಕ್ಷಗಳು ಅದನ್ನು ಬೆಂಬಲಿಸಬೇಕು ಎಂದು ಹೇಳಿದರು.
ಎಲ್ಜೆಪಿಯ (ರಾಮ್ ವಿಲಾಸ್) ಅರುಣ್ ಭಾರ್ತಿ ಅವರು ಬಿಹಾರದಲ್ಲಿ ಶಿಕ್ಷಣ ಸಾಲವನ್ನು ಅಗ್ಗದ ಬಡ್ಡಿಯಲ್ಲಿ ನೀಡಬೇಕು ಮತ್ತು ಜಾಮೀನು ಮುಕ್ತಗೊಳಿಸಬೇಕು ಎಂದು ಹೇಳಿದರು.