ಬೆಳಗಾವಿ: ಬೆಳಗಾವಿಗೆ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯ ನಿರ್ಮಿಸುವ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಸ್ಥಳ ಪರಿಶೀಲನೆ ನಡೆಸಲಾಯಿತು.
ಬೆಳಗಾವಿಗೆ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನು ನಿರ್ಮಿಸಲು ಈಗಾಗಲೇ 50 ಕೋಟಿ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ. ಈ ಹಿನ್ನೆಲೆ ಇಂದು ಬೆಳಗಾವಿಯ ಹಿಂಡಲಗಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಎಸ್ಪಿ ಡಾ. ಭೀಮಾಶಂಕರ ಗುಳೇದ ಇನ್ನುಳಿದವರ ಉಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಇದಕ್ಕೂ ಮೊದಲು ಈಗಿದ್ದ ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಹಾಗೂ ಸಿಇ ಎನ್ ಅಪರಾಧ ಪೊಲೀಸ್ ಠಾಣೆ ಕಟ್ಟಡವನ್ನು ಪರಿಶೀಲಿಸಿದರು. ನಂತರ ಹಿಂಡಲಗಾ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಬೆಳಗಾವಿ ನಗರವನ್ನು ಬೆಳೆಸಲು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಅವಶ್ಯಕವಾಗಿದೆ. ಈಗಾಗಲೇ ಬೆಳಗಾವಿಯ ಸುವರ್ಣಸೌಧದ ಬಳಿ, ಕಣಬರ್ಗಿ ಮತ್ತು ಹಿಂಡಲಗಾ ಹೀಗೆ ಮೂರು ಕಡೆ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಹಿಂಡಲಗಾ ನಗರಕ್ಕೆ ಹತ್ತಿರವಾಗಿದೆ. ಇದ್ದ ಜಾಗದಲ್ಲೇ ಹೊಸ ಕಟ್ಟಡ ನಿರ್ಮಿಸುವ ಯೋಚನೆಯಿತ್ತು. ಆದರೇ, ಐತಿಹಾಸಿಕ ಕಟ್ಟಡಗಳನ್ನು ತೆರವುಗೊಳಿಸುವುದು ಅನಾವಶ್ಯಕ ಚರ್ಚೆಗೆ ಕಾರಣ. ಅಲ್ಲದೇ ಇಲ್ಲಿ ಹೆಚ್ಚಾಗಿ ಜನದಟ್ಟಣೆಯಾಗುತ್ತಿದ್ದು, ಬೇರೆಡೆ ವಿಶಾಲವಾದ ಸ್ಥಳದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ನಿರ್ಮಿಸಲಾಗುತ್ತಿದೆ ಎಂದರು.