ಬೆಂಗಳೂರು : ಮಂಡ್ಯದಲ್ಲಿ ಆಯೋಜಿಸಲು ಉದ್ದೇಶಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನ ಆಯೋಜನೆಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರೊಂದಿಗೆ ಚರ್ಚಿಸಿ ಸಮ್ಮೇಳನ ಆಯೋಜನೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
2023ರ ನವೆಂಬರ್ ಅಥವಾ ಡಿಸೆಂಬರ್ನಲ್ಲಿಯೇ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು. ಆದರೆ, ರಾಜ್ಯದಲ್ಲಿ ಬರಗಾಲ ಇದ್ದ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮುಂದೂಡಲಾಗಿತ್ತು. ಆ ನಂತರ 2024ರ ಫೆಬ್ರವರಿಯಲ್ಲಿ ಸಮ್ಮೇಳನ ನಡೆಸುವ ಅಭಿಲಾಷೆಯನ್ನು ಅಧ್ಯಕ್ಷರು ಹೊಂದಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ಜೂ. 7-9ರವರೆಗೆ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿತ್ತು. ಈ ನಡುವೆ ಲೋಕಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನಿಗದಿತ ಅವಧಿಯಲ್ಲಿ ಸಮ್ಮೇಳನ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮ್ಮೇಳನ ಆಯೋಜನೆಯ ದಿನಾಂಕ ಮುಂದೂಡಲ್ಪಟ್ಟಿದೆ.