ಬೆಳಗಾವಿ : ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಹೋರಾಟ ನಡೆಸುವುದಾಗಿ ಧಾರವಾಡ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ. ಪತ್ರಕರ್ತರ ಜೊತೆ ಮಂಗಳವಾರ ಬೆಳಗಾವಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಪಡೆಯಲು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಕಳೆದ 25 ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ನಾವು ಅವರಿಗೆ ಬೆಂಬಲ ನೀಡಿದ್ದು ರಾಜ್ಯ ಸರಕಾರಕ್ಕೂ ಈ ಬಗ್ಗೆ ಕೋರಿದ್ದೇವೆ. ಬರುವ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.
ಪಂಚಮಸಾಲಿ ಹೋರಾಟದಲ್ಲಿ ಬಿಜೆಪಿ ಸರ್ಕಾರ ಸುಳ್ಳು ಭರವಸೆ ಕೊಟ್ಟು ದಾರಿ ತಪ್ಪಿಸಿದೆ. ಎಲ್ಲಾ ಸಮಾಜಗಳ ಬೇಡಿಕೆಗೆ ಸರಕಾರ ಸ್ಪಂದಿಸುವ ಕೆಲಸ ಮಾಡಬೇಕು. ಎಲ್ಲ ಸಮಾಜದಂತೆ ನಮ್ಮನ್ನು ಪರಿಗಣಿಸಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಸ್ವಾಮೀಜಿಗಳು ನಡೆಸುವ ಹೋರಾಟದಲ್ಲಿ ನಾವೆಲ್ಲ ಭಾಗಿಯಾಗುತ್ತೇವೆ. ಜೊತೆಗೆ ಮುಖ್ಯಮಂತ್ರಿಗಳನ್ನು ಸಹಾ ಭೇಟಿಯಾಗುತ್ತೇವೆ ಎಂದು ಅವರು ಹೇಳಿದರು.
ನಾನು ಹಾಗೂ ಲಕ್ಷ್ಮಣ ಸವದಿ ಸಚಿವರಾಗುತ್ತೇವೆ ಎಂಬ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ನಾವಿಬ್ಬರು ಮಂತ್ರಿ ಆಗುವ ಬಗ್ಗೆ ಚರ್ಚೆ ನಡೆದಿರಬಹುದು. ಆದರೆ ಅದು ನನಗೆ ಗೊತ್ತಿಲ್ಲ. ನನ್ನ ಮುಂದೆ ಯಾವುದೇ ಚರ್ಚೆ ಹಾಗೂ ಸಭೆ ಆಗಿಲ್ಲ. ಈ ಹಿಂದೆ ಮಂತ್ರಿ ಆದಾಗ ನಾನು ಯಾರಿಗೂ ಮನವಿ ಮಾಡಿಕೊಂಡಿರಲಿಲ್ಲ. ನನ್ನ ಶಕ್ತಿ ಸಾಮರ್ಥ್ಯ ನೋಡಿ ಸಚಿವ ಸ್ಥಾನ ನೀಡಿದ್ದರು. ಒತ್ತಡ ಹಾಕಿ ಮಂತ್ರಿ ಸ್ಥಾನ ಪಡೆಯುವ ಅವಶ್ಯಕತೆ ನನಗಿಲ್ಲ. ನನ್ನ ವ್ಯಕ್ತಿತ್ವ ಗುರುತಿಸಿ ಸಚಿವ ಸ್ಥಾನ ನೀಡಬೇಕು. ಪಕ್ಷದಲ್ಲಿ ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಇದೆ. ನಾನು ಈ ಹಿಂದೆ ಕೇಳದೆ ಕೆಪಿಸಿಸಿ ಕಾರ್ಯಾಧ್ಯಕ್ಷ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಪಕ್ಷ ನೀಡಿದ್ದು ಸಚಿವ ಸ್ಥಾನವೂ ಸಿಗಲಿದೆ. ನನಗೂ ಸಚಿವನಾಗ ಬೇಕು ಎಂಬ ಆಸೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ನನ್ನದೇ ಆದ ಛಾಪು ಇದ್ದು ಸಚಿವ ಸ್ಥಾನ ನೀಡುವಾಗ ನನಗೆ ಇರುವ ಹಿರಿತನ ಪರಿಗಣನೆಗೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆಯ ಸೋಲು-ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೋಲು-ಗೆಲುವು ಸಾಮಾನ್ಯ. ಚುನಾವಣೆಯಲ್ಲಿ ಸೋತ ತಕ್ಷಣ ಉಸ್ತುವಾರಿ ಸಚಿವರ ಬದಲಾವಣೆ ಇರುವುದಿಲ್ಲ. ಚುನಾವಣೆ ಸೋಲಿಗೆ ಕಾರಣಗಳು ಇರುತ್ತವೆ ಎಂದು ಅವರು ವಿಶ್ಲೇಷಣೆ ಮಾಡಿದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಹೊರತರಲು ಪ್ರಭಾವಿಗಳು ಒತ್ತಡ ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಒತ್ತಡ ಹಾಕಲು ಯಾರು ಬರುವುದಿಲ್ಲ. ಇಡೀ ರಾಜ್ಯಕ್ಕೆ ಅದು ಗೊತ್ತಿದೆ. ಯಾರು ಒತ್ತಡ ಹಾಕಲು ಸಾಧ್ಯವಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ತುಸು ಆತುರದಿಂದ ವರ್ತಿಸಿದ್ದಾರೆ. ನಮ್ಮೊಂದಿಗೆ ಇರುವಾಗ ಅವರು ಆ ರೀತಿ ಇರುತ್ತಿರಲಿಲ್ಲ. ದರ್ಶನ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿ ಕ್ರಮ ಜರುಗಿಸಿದ್ದಾರೆ. ಅದು ಪೊಲೀಸರ ಕರ್ತವ್ಯ. ಯಾರೇ ತಪ್ಪು ಮಾಡಿದರು ಅದು ತಪ್ಪೇ. ಶಿಕ್ಷೆ ಏನು ಆಗಬೇಕು ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.