ಬೆಳಗಾವಿ :
ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಯಶಸ್ಸನ್ನು ಸಾಧಿಸಬೇಕು. ಯಶಸ್ಸು ದೊರೆಯುವ ವರೆಗೆ ಕ್ರಿಯಾಶೀಲವಾಗಿ ಪ್ರಯತ್ನದಲ್ಲಿ ತೊಡಗಿದಾಗ ಪ್ರತಿಫಲ ನಮ್ಮದಾಗುತ್ತದೆ ಎಂದು ಮಧುಮೇಹ ತಜ್ಞ ವೈದ್ಯೆ ಡಾ.ಆರತಿ ದರ್ಶನ ಹೇಳಿದರು. ಅವರು ಲಿಂಗರಾಜ ಪಿಯು ಕಾಲೇಜಿನ ದ್ವಿತೀಯ ವರ್ಷದ ಬಿಳ್ಕೊಡುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಮಹತ್ವಪೂರ್ಣವಾದ ಘಟ್ಟವಾಗಿದ್ದು ಅದನ್ನು ಸವಾಲಾಗಿ ಸ್ವೀಕರಿಸಿ ಪರೀಕ್ಷೆಯನ್ನು ಎದುರಿಸಬೇಕು. ಕಾಲೇಜಿನ ದಿನಗಳು ಮತ್ತೆ ಮತ್ತೆ ದೊರೆಯುವುದಿಲ್ಲ. ಇಲ್ಲಿಯ ಪ್ರತಿಯೊಂದು ದಿನಗಳನ್ನು ಅನುಭವಿಸಬೇಕು. ಅದರೊಂದಿಗೆ ನಿರ್ದಿಷ್ಟವಾದ ಗುರಿಯನ್ನು ಪಡೆಯುವುದಕ್ಕಾಗಿ ಹಗಲಿರಳು ಶ್ರಮಿಸಬೇಕು. ತಂದೆತಾಯಿಗಳು ನಮ್ಮ ಮೇಲೆ ಇಟ್ಟ ಭರವಸೆಯನ್ನು ಹುಸಿಗೊಳಿಸದೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಬೇಕು. ಸ್ಪರ್ಧೆಯು ಇಂದು ಎಲ್ಲ ರಂಗಗಳಲ್ಲಿ ಹಾಸುಹೊಕ್ಕಾಗಿರುವುದರಿಂದ ಅದನ್ನು ಸಮರ್ಥವಾಗಿ ಎದುರಿಸುವ ಮನೋಭಾವ ನಮ್ಮದಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿಯವರು ಮಾತನಾಡುತ್ತ, ವಿದ್ಯೆಯನ್ನು ನೀಡಿದ ಗುರುಗಳು, ಸಂಸ್ಕಾರವನ್ನು ಕೊಟ್ಟ ತಂದೆ-ತಾಯಿಗಳ ಋಣವನ್ನು ತೀರಿಸುವುದು ಬಲುಕಷ್ಟ. ಗುರುಗಳಿಗೆ ತಂದೆ ತಾಯಿಗಳಿಗೆ ಮಹಾವಿದ್ಯಾಲಯಕ್ಕೆ ನಾವು ಉಪಕೃತರಾಗಿರಬೇಕು. ಒಬ್ಬ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಸ್ಥಾನಮಾನಾದಿಗಳನ್ನು ಪಡೆದರೆ ಆ ವಿದ್ಯಾಲಯಕ್ಕೆ ಒಂದು ಹೆಮ್ಮೆಯ ಸಂಗತಿ. ಎಲ್ಲರೂ ನಿಮಗೆ ದೊರೆತ ವಿದ್ಯೆಯನ್ನು ಸದ್ವಿನಿಯೋಗ ಮಾಡಿಕೊಂಡು ಸಮಾಜಮುಖಿಯಾಗಿ ಬದುಕಿ. ರಾಷ್ಟ ನಿರ್ಮಾಣದಲ್ಲಿ ನಿಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪಿಯುಸಿ ಪ್ರಾಚಾರ್ಯ ಗಿರಿಜಾ ಹಿರೇಮಠ ವಾರ್ಷಿಕ ವರದಿ ವಾಚಿಸಿದರು. ಪ್ರಶಾಂತ ಕೊಣ್ಣೂರ ಸ್ವಾಗತಿಸಿದರು. ಮನೋಹರ ಜಂಗಲಿ ವಂದಿಸಿದರು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಪಾರ್ವತಿ ರಾಜಶೇಖರ, ಪ್ರಶಾಂತ ಖೋತ ಉಪಸ್ಥಿತರಿದ್ದರು.
ಈ ವರ್ಷದ ಆದರ್ಶ ವಿದ್ಯಾರ್ಥಿಯಾಗಿ ಸತ್ಯಂ ಚೌಗಲೆ, ಆದರ್ಶ ವಿದ್ಯಾರ್ಥಿನಿಯಾಗಿ ಪ್ರಿಯಾಂಕಾ ಕುಲಕರ್ಣಿ, ಆದರ್ಶ ಸಂಯೋಜಕರಾಗಿ ಶ್ರೇಯಂಶ್ ಮೊಕಾಶಿ, ಸುಹಾನಿ ಚಿಕ್ಕೋನ್, ವರ್ಷದ ಕ್ರೀಡಾಸಾಧಕರಾಗಿ ಧನಶ್ರೀ ಕದಮ್ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು.