ನಿಪ್ಪಾಣಿ :
ಕೆಲವರು ತಮ್ಮ ಸಾರ್ಥಕ ಜೀವನದ ವಿಧಾನಗಳಿಂದಾಗಿ ಆಕಾಶದ ಮಿನುಗುವ ತಾರೆಗಳಂತೆ ಬೆಳಕನ್ನೀಯುತ್ತಾ ಚಿರಾಯುವಾಗಿರುತ್ತಾರೆ. ಅಂತಹ ವಿರಳ ಸಾಲಿನಲ್ಲಿ ನಮ್ಮ ತ್ಯಾಗವೀರ ಸಿರಸಂಗಿ ಲಿಂಗರಾಜರು ಸದಾ ಕಾಲಕ್ಕೂ ಪ್ರಾತಃ ಸ್ಮರಣೀಯರು ಎಂದು ಹುಕ್ಕೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅವಲಕ್ಕಿ ಅಭಿಪ್ರಾಯಪಟ್ಟರು.
ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಜಿ. ಆಯ್. ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಇಲ್ಲಿನ ಎಲ್ಲ ಅಂಗಸಂಸ್ಥೆಗಳು ಜಂಟಿಯಾಗಿ ಮಂಗಳವಾರ ಏರ್ಪಡಿಸಿದ್ದ 162 ನೆಯ ತ್ಯಾಗವೀರ ಸಿರಸಂಗಿ ಲಿಂಗರಾಜರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜಕ್ಕಾಗಿ, ಶಿಕ್ಷಣಕ್ಕಾಗಿ ತಮ್ಮ ಸಂಸ್ಥಾನದ ಸಮಸ್ತ ಆಸ್ತಿಯನ್ನು ದಾನವಾಗಿ ಧಾರೆಯೆರೆದು ತಮ್ಮ ಮೃತ್ಯುಪತ್ರವನ್ನು ದಾನಪತ್ರವನ್ನಾಗಿ ಮಾಡಿ ಮಾದರಿಯಾದರು ಲಿಂಗರಾಜರು. ಅವರ ಆದರ್ಶಗಳ ಕೆಲವು ಅಂಶಗಳನ್ನು ನಾವು ಇಂದಿನ ಯುವಸಮಾಜ ಅಳವಡಿಸಿಕೊಂಡಲ್ಲಿ ಈ ಜಯಂತಿ ಆಚರಣೆ ಅರ್ಥಪೂರ್ಣ ಮತ್ತು ಸಾರ್ಥಕ ಎಂದರು.
ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಪ್ರವೀಣ ಬಾಗೇವಾಡಿ, ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ ಬಾಗೇವಾಡಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಪದವಿ ಪ್ರಾಚಾರ್ಯ ಡಾ. ಎಂ.ಎಂ. ಹುರಳಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಅತಿಥಿ ಸಹಿತ ಗಣ್ಯರಿಂದ ಲಿಂಗರಾಜರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.
ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಅಂಗ ಸಂಸ್ಥೆಗಳ ಎಲ್ಲ ಪ್ರಾಚಾರ್ಯರೂ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉದ್ಧವ ಸಾಳುಂಕೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ.ಪೂ.ಪ್ರಾಚಾರ್ಯೆ ಹೇಮಾ ಚಿಕ್ಕಮಠ ಸ್ವಾಗತಿಸಿದರು. ಔಷಧ ವಿಜ್ಞಾನ ಮಹಾ ವಿದ್ಯಾಲಯದ ಪ್ರಾಚಾರ್ಯ ಪ್ರಮೋದ ಗಡಾದ ಪರಿಚಯಿಸಿದರು. ಗೀತಾ ಕಮತೆ ಮತ್ತು ನಮಿತಾ ನಾಯಿಕ ನಿರೂಪಿಸಿದರು. ಆಂಗ್ಲ ಮಾಧ್ಯಮ ಮಾಧ್ಯಮಿಕ ಶಾಲೆಯ ಪ್ರಾಚಾರ್ಯ ಪಿ.ಐ. ಪಾಟೀಲ ವಂದಿಸಿದರು.