ಬೆಳಗಾವಿ :
ಉತ್ತರ ಕರ್ನಾಟಕ ಜನತೆ ಕನ್ನಡ ಚಲನಚಿತ್ರ ರಂಗವನ್ನು ಮೊದಲಿನಿಂದಲೂ ಎತ್ತಿಹಿಡಿದವರು. ಅಂತೆಯೇ ಅಸಂಖ್ಯ ಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಾಯಿತು. ಕಲಾವಿದರನ್ನು ಪ್ರೋತ್ಸಾಹಿಸುವ ನಿಜವಾದ ಸಹೃದಯಿಗಳು ಕಾಣಸಿಗುವುದು ಉತ್ತರ ಕರ್ನಾಟಕದಲ್ಲಿಯೇ ಎಂದು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಹೇಳಿದರು.
ಅವರು ಜೆಎನ್ಎಂಸಿಯ ಜೀರಗೆ ಸಭಾಗೃಹದಲ್ಲಿ ಲಿಂಗರಾಜ ಕಾಲೇಜಿನ ಕನ್ನಡ ಬಳಗವು ಆಯೋಜಿಸಿದ್ದ ‘ಟೋಬಿ’ ಸಿನಿಮಾದ ತಂಡದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಅಸಾಧ್ಯವಾದುದು ಯಾವುದು ಇಲ್ಲ. ಪ್ರಯತ್ನಪಟ್ಟರೆ ಏನೆಲ್ಲವನ್ನೂ ಸಾಧಿಸಲು ಸಾಧ್ಯ ಅದಕ್ಕೆ ನಾನೇ ಸಾಕ್ಷಿಯಾಗಿ ನಿಂತಿದ್ದೇನೆ. ಈ ಮೊದಲು ಸಮುದಾಯ ರೇಡಿಯೋ, ಜಾಹಿರಾತು ಕ್ಷೇತ್ರಗಳಲ್ಲಿ ನಿರೂಪಕನಾಗಿ ಕಾರ್ಯನಿರ್ವಹಿಸುತ್ತಾ ಇಂದು ಚಲನಚಿತ್ರ ಕ್ಷೇತ್ರದಲ್ಲಿ ದಾಪುಗಾಲಿಡಲು ಸಾಧ್ಯವಾಯಿತು. ಕಲಾ ರಸಿಕರು, ಅಭಿಮಾನಿಗಳು ನನ್ನನ್ನು ಪ್ರೋತ್ಸಾಹಿಸಿ ಕೈಹಿಡಿದಿದ್ದಾರೆ. ಅದರಲ್ಲಿಯೂ ಟೋಬಿ ತಂಡದೊಂದಿಗೆ ಉತ್ತರ ಕರ್ನಾಟಕದಲ್ಲಿಯೇ ಮೊದಲಬಾರಿಗೆ ಬೆಳಗಾವಿಗೆ ಆಗಮಿಸಿದ್ದು ಬಹಳ ಸಂತೋಷ ತಂದಿತು. ಅದರಲ್ಲಿಯೂ ಬೆಳಗಾವಿಯಲ್ಲಿ ಜರುಗಿದ ಮೂರು ಕಾರ್ಯಕ್ರಮದಲ್ಲಿ ಪ್ರಸ್ತುತ ಸಂವಾದ ಗೋಷ್ಠಿಯು ನನಗೆ ಸಂತೃಪ್ತಿಯನ್ನುಂಟುಮಾಡಿದೆ. ಚಲನಚಿತ್ರ ಕ್ಷೇತ್ರವು ಇಂದು ಸಾಕಷ್ಟು ವೈವಿಧ್ಯತೆ ಹಾಗೂ ಸೃಜನಶೀಲವಾಗಿ ರೂಪುಗೊಂಡಿದೆ. ಸಾಕಷ್ಟು ಅವಕಾಶಗಳು ಕೈಬೀಸಿ ಕರೆಯುತ್ತಿವೆ.
ಪ್ರಯತ್ನಶೀಲತೆಯಿಂದ ಕಲಾತ್ಮಕವಾದ ಚಲನಚಿತ್ರಗಳನ್ನು ಯಶಸ್ವಿಗೊಳಿಸಬಹುದು. ಉತ್ತರ ಕರ್ನಾಟಕ ಭಾಷೆ ಹಾಗೂ ಸಂಸ್ಕೃತಿಯನ್ನು ಬಳಸಿಕೊಂಡು ಇಲ್ಲಿಯ ಕಲಾವಿದರ ಮೂಲಕವೇ ಇನ್ನೊಂದು ಚಿತ್ರವನ್ನು ನಿರ್ಮಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ನೀಡಿದರು. ಕಾರ್ಯಕ್ರಮದ ಕೊನೆಗೆ ಅವರ ಇಷ್ಟವಾದ ಹುಲಿ ನೃತ್ಯವನ್ನು ಮಾಡಿ ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಎಂ.ಚನ್ನಪ್ಪಗೋಳ, ಕನ್ನಡ ಬಳಗದ ಸಂಯೋಜಕಿ ಡಾ.ರೇಣುಕಾ ಕಠಾರಿ, ಟೋಬಿ ಸಿನಿಮಾದ ನಟರು, ನಿರ್ದೇಶಕ ಟಿ.ಕೆ. ದಯಾನಂದ, ಸಂಯೋಜಕ ಮನು, ಪ್ರಾಧ್ಯಾಪಕರು ಸಿಬ್ಬಂದವರ್ಗದವರು ಉಪಸ್ಥಿತರಿದ್ದರು.