ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ (ಕೋಟೆಕಾರು ಬ್ಯಾಂಕ್) ಮಧ್ಯಾಹ್ನ 11.30ರಿಂದ 12.30ರ ನಡುವಿನ ಅವಧಿಯಲ್ಲಿ ಐದು ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಚಿನ್ನಾಭರಣ, ನಗದು ಹೊತ್ತೊಯ್ದಿದ್ದಾರೆ.
ದರೋಡೆಕೋರರ ಕೈಯಲ್ಲಿ ಬಂದೂಕು, ತಲವಾರು, ಚಾಕು ಹಿಡಿದಿದ್ದರು. ಈ ವೇಳೆ ಬ್ಯಾಂಕ್ ನಲ್ಲಿ ನಾಲ್ಕೈದು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಸಿಬ್ಬಂದಿಗೆ ಬಂದೂಕು ತೋರಿಸಿ ಲಾಕರ್ ಬಾಗಿಲು ತೆಗೆದಿಸಿದ ದರೋಡೆಕೋರರು ಚಿನ್ನ, ನಗದನ್ನು ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಕಳವಾದ ಚಿನ್ನಾಭರಣ, ನಗದು ಅಂದಾಜು ರೂ. 10-12 ಕೋಟಿ ಇರಬಹುದು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ದರೋಡೆಕೋರರು ಹಿಂದಿನಲ್ಲಿ ಮಾತನಾಡುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ದರೋಡೆಕೋರರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ನ ಕೆಳಗಿನ ಮಹಡಿಯಲ್ಲಿರುವ ಬೇಕರಿಯಲ್ಲಿದ್ದ ಕೆಲ ವಿದ್ಯಾರ್ಥಿಗಳು ಸಿಬ್ಬಂದಿ ಕೂಗಿಕೊಳ್ಳುವುದನ್ನು ಕೇಳಿ ಅತ್ತ ಓಡಿದಾಗ, ದರೋಡೆಕೋರರು ಅವರನ್ನು ಬೆದರಿಸಿದ್ದಾರೆ. ವಿದ್ಯಾರ್ಥಿಗಳ ಬಳಿ ಅವರು ಕನ್ನಡದಲ್ಲಿ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಬಳಿ ಹಿಂದಿಯಲ್ಲಿ ಮಾತನಾಡಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.