ಬೆಳಗಾವಿ: ಹುಕ್ಕೇರಿ ತಾಲೂಕಿನ ಹೆಬ್ಬಾಳ ಬಳಿ ಗುರುವಾರ ಸಿಡಿಲಿಗೆ ವ್ಯಕ್ತಿ ಬಲಿಯಾಗಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೊತೆಗೆ ಕೆಲ ಕುರಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಗುರುವಾರ ಸಂಜೆ ಹುಕ್ಕೇರಿ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಭಾರಿ ಮಳೆಯಿಂದ ಹೆದ್ದಾರಿಗಳು ನದಿಯಂತೆ ಭಾಸವಾಗಿವೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಹೋಗಿದ್ದು ಜನ ಜೀವನ ಕೆಲಹೊತ್ತು ಅಸ್ತವ್ಯಸ್ತಗೊಂಡಿದೆ. ಸಿಡಿಲಿಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯ ನೀರು ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ನದಿಯಂತೆ ಕಂಡು ಬಂದಿದೆ. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ರಾಯಬಾಗ ಪಟ್ಟಣದ ಹೊರ ವಲಯದ ಜಮೀನಿನಲ್ಲಿ ಗುರುವಾರ ಕೃಷಿ ಕೆಲಸದಲ್ಲಿ ತೊಡಗಿದ್ದ ಶೋಭಾ ಕೃಷ್ಣಾ ಕುಲಗುಡೆ(43) ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಲ್ಲಪ್ಪ ಶಂಕರ ಮೇತ್ರಿ(43), ಭಾರತಿ ಕೆಂಪಣ್ಣ ಕಮತೆ(32), ಬಾಬುರಾವ ಅಶೋಕ ಚವ್ಹಾಣ(30) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.